ಚುನಾವಣಾ ವೇಳಾಪಟ್ಟಿ ಪ್ರಕಟ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಗೆ ಸಕಲ ಸಿದ್ಧತೆ ಮುಕ್ತ ನ್ಯಾಯ ಸಮ್ಮತ ಚುನಾವಣೆ : ಅಕ್ರಮಗಳಿಗೆ ಕಡಿವಾಣ -ಜಿಲ್ಲಾಧಿಕಾರಿ ದಿವ್ಯಪ್ರಭು ಜೆ.ಆರ್.ಜಿ

by | 31/03/23 | ಸುದ್ದಿ

ಚಿತ್ರದುರ್ಗ ಮಾರ್ಚ್29:
ಕೇಂದ್ರ ಚುನಾವಣಾ ಆಯೋಗ ರಾಜ್ಯದ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಗೆ ದಿನಾಂಕ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದ್ದು, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದೆ. ಚುನಾವಣೆಗೆ ಜಿಲ್ಲೆಯಲ್ಲಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಬಿಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು .ಜೆ.ಆರ್.ಜೆ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ವಿಧಾನ ಸಭಾ ಚುನಾವಣೆ ಘೋಷಣೆ ಹಾಗೂ ಮಾದರಿ ನೀತಿ ಸಂಹಿತೆ ಜಾರಿ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಚುನಾವಣೆ ಮಾದರಿ ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಯಾಗಿದ್ದು, ಏಪ್ರಿಲ್ 13 ರಂದು ಚುನಾವಣೆ ಅಧಿಸೂಚನೆ ಹೊರಡಿಸಲಾಗುವುದು. ಏಪ್ರಿಲ್ 20 ರಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ. ಏಪ್ರಿಲ್ 21 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 24 ನಾಮಪತ್ರಗಳನ್ನು ಹಿಂಪಡೆಯಲು ಕಡೆಯ ದಿನವಾಗಿದೆ. ಮೇ 10 ರಂದು ಮತದಾನ ನಡೆಯಲಿದೆ. ಮೇ 13 ಮತ ಎಣಿಕೆ ಕಾರ್ಯ ನಡೆದು, ಚುನಾವಣೆ ಫಲಿತಾಂಶ ಹೊರ ಬೀಳಲಿದೆ. ಮೇ 15 ರ ಒಳಗೆ ಚುನಾವಣೆ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ ಎಂದರು.
13,95,641 ಮಂದಿ ಮತದಾರರು:
**********ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಿದ್ದು, 1648 ಮತಗಟ್ಟೆಗಳಿವೆ. ಮತದಾರರ ಅಂತಿಮ ಪಟ್ಟಿ ಪ್ರಕಾರ ಜಿಲ್ಲೆಯಲ್ಲಿ 13,80,670 ಮತದಾರರಿದ್ದಾರೆ. ಇಂದಿನವರೆಗೂ ಜಿಲ್ಲೆಯಲ್ಲಿ 13,95,641 ಮಂದಿ ಮತದಾರರಿದ್ದಾರೆ. 6,97,131 ಪುರುಷ ಮತದಾರರು ಹಾಗೂ 6,98,438 ಮಹಿಳಾ ಮತದಾರರಿದ್ದಾರೆ. 382-ಸೇವಾ ಮತದಾರರು, 35,722-ಯುವ ಮತದಾರರು, 833-ಲಿಂಗತ್ವ ಅಲ್ಪಸಂಖ್ಯಾತರು, 2,793-ಲೈಂಗಿಕ ಕಾರ್ಯಕರ್ತರು, 23,472-ಅಂಗವಿಕಲರು ಹಾಗೂ 31,073 ಮಂದಿ 80 ವರ್ಷ ಮೇಲ್ಪಟ್ಟ ಮತದಾರರು ಇದ್ದಾರೆ ಎಂದು ತಿಳಿಸಿದರು.
ಏಪ್ರಿಲ್ 11 ರವರೆಗೂ ಮತದಾರರ ಪಟ್ಟಿಗೆ ಸೇರ್ಪಡೆಗೆ ಅವಕಾಶ:
********ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ 2023ರ ಏಪ್ರಿಲ್ 11 ರವರೆಗೂ ಅವಕಾಶ ನೀಡಲಾಗಿದೆ. 18 ವರ್ಷ ಮೇಲ್ಪಟ್ಟವರೂ, ಮತದಾರ ಪಟ್ಟಿಯಲ್ಲಿ ಹೆಸರು ಇಲ್ಲದವರು ಮತದಾರರ ಪಟ್ಟಿಗೆ ಸೇರ್ಪಡೆಗೆ ಸಮೀಪದ ತಹಶೀಲ್ದಾರ್ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಗೆ ಹಾಗೂ ವೋಟರ್ ಹೆಲ್ಪ್‍ಲೈನ್ ಆಪ್ ಹಾಗೂ ಎನ್‍ವಿಎಸ್ ಪೋರ್ಟ್‍ಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮತಪಟ್ಟಿಯಲ್ಲಿ ತಮ್ಮ ಹೆಸರು ಇದೆಯೋ, ಇಲ್ಲವೋ ಎಂಬುದನ್ನು ಬಿಎಲ್‍ಓ ಬಳಿ ಅಥವಾ ವೋಟರ್ ಹೆಲ್ಪ್‍ಲೈನ್ ಆಪ್‍ನಲ್ಲಿಯೂ ಪರಿಶೀಲಿಸಿ ಖಚಿತಪಡಿಸಿಕೊಳ್ಳಬಹುದು ಎಂದು ಹೇಳಿದರು.
ಚುನಾವಣಾಧಿಕಾರಿಗಳ ವಿವರ: ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ (ಎಸ್‍ಟಿ) ಚುನಾವಣಾಧಿಕಾರಿಯಾಗಿ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ರಮೇಶ್ ಕುಮಾರ್, ಸಹಾಯಕ ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ರೂಪಾ ಕಾರ್ಯನಿರ್ವಹಿಸುವರು. ಚಳ್ಳಕೆರೆ ವಿಧಾನಸಭಾ ಕ್ಷೇತ್ರ (ಎಸ್‍ಟಿ) ಚುನಾವಣಾಧಿಕಾರಿಯಾಗಿ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಬಿ.ಆನಂದ್, ಸಹಾಯಕ ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ರೆಹಾನ್ ಪಾಷಾ ಕಾರ್ಯನಿರ್ವಹಿಸುವರು. ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ಸಹಾಯಕ ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಡಾ.ನಾಗವೇಣಿ ಕಾರ್ಯನಿರ್ವಹಿಸುವರು. ಹಿರಿಯೂರು ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿಯಾಗಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೊರಮ ತಿಮ್ಮಪ್ಪ, ಸಹಾಯಕ ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಕಾರ್ಯನಿರ್ವಹಿಸುವರು. ಹೊಸದುರ್ಗ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್ , ಸಹಾಯಕ ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಪಟ್ಟ ರಾಜೇಗೌಡ ಕಾರ್ಯನಿರ್ವಹಿಸುವರು. ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ (ಎಸ್‍ಸಿ) ಚುನಾವಣಾಧಿಕಾರಿಯಾಗಿ ಭದ್ರಾ ಮೇಲ್ದಂಡೆ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ ಟಿ.ವಿವೇಕಾನಂದ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಎನ್.ಜಿ.ನಾಗರಾಜ್ ಕಾರ್ಯನಿರ್ವಹಿಸುವರು ಎಂದು ತಿಳಿಸಿದರು.
ಚುನಾವಣಾ ದೂರುಗಳಿಗೆ ಟೋಲ್ ಫ್ರೀ ಸಂಖ್ಯೆ 1950:
*********ಸಾರ್ವಜನಿಕರು ಚುನಾವಣೆ ಪ್ರಕ್ರಿಯೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ಟೋಲ್ ಫ್ರೀ ಸಂಖ್ಯೆ 1950 ಗೆ ಸಂಪರ್ಕಿಸಬಹುದು. ಅಲ್ಲದೇ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಸಾರ್ವಜನಿಕರು ದೂರುಗಳನ್ನು ಸಿ-ವಿಜಿಲ್ ಮೊಬೈಲ್ ಆಪ್ ಮೂಲಕವೂ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸ್ವೀಕರಿಸಲಾದ ದೂರುಗಳನ್ನು ನಿಗಧಿತ ಸಮಯದಲ್ಲಿ ಬಗೆಹರಿಸಲಾಗುವುದು ಎಂದರು.
35 ಚೆಕ್‍ಪೋಸ್ಟ್ ಕಾರ್ಯನಿರ್ವಹಣೆ: ಚುನಾವಣಾ ಅಕ್ರಮ ತಡೆಗಾಗಿ ಜಿಲ್ಲೆಯಲ್ಲಿ 35 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದ್ದು, ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯು ಮೊಳಕಾಲ್ಮುರು, ಚಳ್ಳಕೆರೆ ಹಾಗೂ ಹಿರಿಯೂರು ತಾಲ್ಲೂಕುಗಳು ಆಂದ್ರಪ್ರದೇಶದ ಅನಂತಪುರ ಜಿಲ್ಲೆಯೊಂದಿಗೆ 150 ಕಿ.ಮೀ ಗಡಿ ಹೊಂದಿದೆ. ಹಾಗಾಗಿ 8 ಕಡೆ ಅಂತರರಾಜ್ಯ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಪ್ರಾರಂಭವಾಗುವುದಕ್ಕಿಂತ ಮುಂಚಿತವಾಗಿಯೇ ಐ.ಪಿ.ಸಿ,ಸಿ.ಆರ್.ಪಿ.ಸಿ ಅಬಕಾರಿ ಕಾಯ್ದೆ, ಪೊಲೀಸ್ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ರೂ. 15,97,200 ನಗದು, 239.26 ಲೀಟರ್ ಮದ್ಯ, (ಸುಮಾರು ರೂ.2,98,599) 1.267 ಕೆ.ಜಿ ಗಾಂಜಾ (ರೂ30,500), 150 ಸೀರೆಗಳು (ರೂ.2,89,700/-) ವಶಕ್ಕೆ ಪಡೆಯಲಾಗಿದ್ದು, ಇಲ್ಲಿಯವರೆಗೂ ನಗದು, ಎಲ್ಲ ವಸ್ತುಗಳ ಮೌಲ್ಯ ಸೇರಿದಂತೆ ಒಟ್ಟು 22,19,499 ರೂಗಳನ್ನು ಚೆಕ್‍ಪೋಸ್ಟ್ ಸೇರಿದಂತೆ ವಿವಿಧ ತಂಡಗಳಿಂದ ವಶಕ್ಕೆ ಪಡೆದು ಸೀಜ್ ಮಾಡಲಾಗಿದೆ ಎಂದು ತಿಳಿಸಿದರು.
ವೃದ್ಧರು ಹಾಗೂ ಅಂಗವಿಕಲರಿಗೆ ಪೋಸ್ಟಲ್ ಬ್ಯಾಲೆಟ್:
********* ಈ ಬಾರಿ 80 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲರು ಪೋಸ್ಟಲ್ ಬ್ಯಾಲೆಟ್ ಮೂಲಕ ಮತ ಚಲಾಯಿಸಲು ಅವಕಾಶ ನೀಡಲಾಗಿದೆ. ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳ ಮುಖಾಂತರ ಪೋಸ್ಟ್‍ಲ್ ಬ್ಯಾಲೆಟ್ ಪಡೆಯಬಹುದು. ಒಮ್ಮೆ ಪೋಸ್ಟ್‍ಲ್ ಬ್ಯಾಲೆಟ್ ಪಡೆದವರು ಮತಗಟ್ಟೆಗೆ ಬಂದು ಮತ ಚಲಾಯಿಸಲು ಅವಕಾಶವಿಲ್ಲ. ಸಾಮಾಜಿಕ ಮಾಧ್ಯಮ, ಆನ್‍ಲೈನ್ ಪ್ರೆಸ್, ಇ-ಪೇಪರ್‍ಗಳಲ್ಲಿ ರಾಜಕೀಯ ಕುರಿತು ಸುದ್ಧಿ ಹಾಗೂ ಪ್ರಚಾರ ಮಾಡುವ ಮುನ್ನ ಎಂ.ಸಿ.ಎಂ.ಸಿ ಸಮಿತಿಯಿಂದ ಪ್ರೀ ಸರ್ಟಿಫಿಕೇಷನ್ ಪಡೆಯುವುದು ಕಡ್ಡಾಯ. ಇದರ ನಿರ್ವಹಣೆಗಾಗಿ ಪ್ರೀ ಸರ್ಟಿಫಿಕೇಷನ್ ತಂಡಗಳನ್ನು ಸಹ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು.ಜೆ.ಆರ್.ಜೆ ಈ ಸಂದರ್ಭದಲ್ಲಿ ತಿಳಿಸಿದರು.
ಚುನಾವಣೆ ಅಕ್ರಮ 52 ಪ್ರಕರಣಗಳಲ್ಲಿ ಶಿಕ್ಷೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್ ಮಾತನಾಡಿ, 2013 ಹಾಗೂ 2018ರ ವಿಧಾನಸಭಾ ಹಾಗೂ 2019ರ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ದಾಖಲಿಸಿದ ಪ್ರಕರಣಗಳ ಪೈಕಿ 52 ಪ್ರಕರಣಗಳ 138 ಜನರು ಶಿಕ್ಷೆಗೆ ಒಳಗಾಗಿದ್ದಾರೆ. ಇಂತಹವರ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಪ್ರತಿಬಂಧಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವ ದೃಷ್ಠಿಯಿಂದ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ 1020 ಜನರ ವಿರುದ್ಧ ಪ್ರತಿಬಂಧಕ ಪ್ರಕರಣಗಳನ್ನು ದಾಖಲಿಸಿ, ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ 1174 ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರಗಳು ಇವೆ. ಇದರಲ್ಲಿ ಬೇರೆ ಬೇರೆ ಕಾರಣಗಳಿಂದ 620 ಶಸ್ತ್ರಾಸ್ತ್ರಗಳು ಜಮೆಯಾಗಿವೆ. ಜಿಲ್ಲಾ ಚುನಾವಣಾ ಅಧಿಕಾರಿ ಆದೇಶ ನೀಡಿದ ತಕ್ಷಣ ಉಳಿದ ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗುವುದು. ಹಣಕಾಸು ವ್ಯವಹಾರ ನಡೆಸುವ ಕಂಪನಿಗಳು, ಬ್ಯಾಂಕ್‍ಗಳು ಹಾಗೂ ತೀವ್ರತರನಾದ ಜೀವ ಭಯ ಇರುವ ವ್ಯಕ್ತಿಗಳು ಅಗತ್ಯವಾಗಿ ಶಸ್ತ್ರಾಸ್ತ್ರಗಳು ಬೇಕು ಎಂದರೆ, ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಗೆ ಅರ್ಜಿ ಸಲ್ಲಿಸಬಹದು. ಇದರ ವಾಸ್ತವತೆಯನ್ನು ಪೊಲೀಸ್ ಇಲಾಖೆಯಿಂದ ಸಮಾಲೋಚಿಸಿ ಶಸ್ತ್ರಾಸ್ತ್ರ ಹೊಂದಲು ಅವಕಾಶ ನೀಡಲಾಗುವುದು. ಚುನಾವಣಾ ಆಯೋಗ ನಿರ್ದೇಶನದಂತೆ ಈಗಾಗಲೇ ಚೆಕ್ ಪೊಸ್ಟ್‍ಗಳನ್ನು ನಿರ್ಮಿಸಿ ತಪಾಸಣೆ ನಡೆಸಲಾಗುತ್ತಿದೆ. ಚುನಾವಣೆ ಕರ್ತವ್ಯಕ್ಕೆ ಸಿಬ್ಬಂದಿ ನೇಮಿಸಲು ಕರಡು ಯೋಜನೆ ರೂಪಿಸಿ, ಚುನಾವಣೆ ಆಯೋಗ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ, ಹಿರಿಯೂರು ವಿಧಾನಸಭಾ ಕ್ಷೇತ್ರಗಳಿಗೆ 4 ಸಿಆರ್‍ಪಿಎಫ್ ತುಕಡಿಗಳನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗುವುದು. ಈ ತುಕಡಿಗಳ ಸಿಬ್ಬಂದಿಗಳ ವಾಸ್ತವ್ಯ ಹಾಗೂ ಸೂಕ್ತ ವಾಹನಗಳ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗುವುದು ಎಂದರು.
ಜಿಲ್ಲೆಯಲ್ಲಿ 377 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಇದರಲ್ಲಿ 110 ದುರ್ಬಲ ಮತಗಟ್ಟೆಗಳು ಇವೆ. ಈ ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾರರಿಗೆ ಬೆದರಿಸಿ ಪ್ರಭಾವ ಬೀರುವ 189 ಜನರನ್ನು ಗುರುತಿಸಿ ಪ್ರತಿಬಂಧಕ ಪ್ರಕರಣ ದಾಖಲಿಸಲಾಗಿದೆ. ಇದರೊಂದಿಗೆ ಜಿಲ್ಲೆಯ 8 ಜನರ ಗಡಿಪಾರಿಗೆ ಉಪ ವಿಭಾಗಧಿಕಾರಿ ದಂಡಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಇದರಲ್ಲಿ 3 ಜನರನ್ನು ಗಡಿಪಾರು ಮಾಡಿ, ಬೇರೆ ಜಿಲ್ಲೆಯಲ್ಲಿ ಬಿಟ್ಟುಬಂದು ಅನುಪಾಲನಾ ವರದಿ ಸಲ್ಲಿಸಲಾಗಿದೆ. ಒಬ್ಬ ವ್ಯಕ್ತಿಯ ವಿರುದ್ಧ ಗುಂಡಾ ಕಾಯ್ದೆ ದಾಖಲಿಸಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದುವರೆವಿಗೂ ಜಿಲ್ಲೆಯ ಚೆಕ್ ಪೋಸ್ಟ್‍ಗಳಲ್ಲಿ ವಶಪಡಿಸಿಕೊಂಡ ಹಣ, ಮದ್ಯ ಹಾಗೂ ವಸ್ತುಗಳು ಯಾವುದೇ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿಲ್ಲ ಎಂಬುದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ ಎಂದರು.
ಮಾದರಿ ಚುನಾವಣೆ ನೀತಿ ಸಂಹಿತೆ ಅನ್ವಯ ರೂ.50 ಸಾವಿರ ಮೇಲ್ಪಟ್ಟ ಹಣವನ್ನು ತೆಗೆದುಕೊಂಡು ಹೋಗಲು ಸೂಕ್ತ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಇಲ್ಲವಾದರೆ ಹಣವನ್ನು ಚೆಕ್ ಪೋಸ್ಟ್‍ಗಳಲ್ಲಿ ಜಪ್ತಿ ಮಾಡಿ, ಜಿ.ಪಂ. ಸಿಇಓ ನೇತೃತ್ವದ ನಗದು ಜಪ್ತಿ ಸಮಿತಿ ಒಪ್ಪಿಸಲಾಗುವುದು. ಈ ಹಣ ಚುನಾವಣೆ ಸಂಬಂದಪಟ್ಟಿದ್ದು ಅಲ್ಲ ಎಂದು ನಿರೂಪಿಸಿ ಸೂಕ್ತ ದಾಖಲೆಗಳನ್ನು ಒದಗಿಸಿ ಹಣ ಮರಳಿ ಪಡೆಯಬಹುದು. ಒಂದು ವೇಳೆ ಚುನಾವಣೆ ಅಕ್ರಮಗಳಿಗೆ ಹಣ ಸಾಗಟ ಮಾಡುತ್ತಿದ್ದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದರು.
ಹೆಚ್ಚಿನ ಮತದಾನ ಗುರಿ:
*******ಜಿ.ಪಂ. ಸಿಇಓ ಎಂ.ಎಸ್.ದಿವಾಕರ್ ಮಾತನಾಡಿ ಕಳೆದ ಬಾರಿ ಜಿಲ್ಲೆಯಲ್ಲಿ ಸರಾಸರಿ ಶೇ.80.86 ರಷ್ಟು ಮತದಾನ ಆಗಿತ್ತು. ಇದು ರಾಜ್ಯ ಸರಾಸರಿಗಿಂತ ಶೇ.8 ರಷ್ಟು ಹೆಚ್ಚಾಗಿದೆ. ಜಿಲ್ಲಾ ಸರಾಸರಿ ಮತದಾನ ಪ್ರಮಾಣಕ್ಕಿಂತ 585 ಮತಗಟ್ಟೆಗಳಲ್ಲಿ ಕಡಿಮೆ ಮತದಾನವಾಗಿದೆ. ಈ ಮತಗಟ್ಟೆ ವ್ಯಾಪ್ತಿಗಳಲ್ಲಿ ಸ್ವೀಪ್ ಕಾರ್ಯಚಟುವಟಿಕೆಗಳನ್ನು ಹೆಚ್ಚಾಗಿ ಮಾಡಲಾಗಿದೆ. ಶಿಕ್ಷಣ ಇಲಾಖೆ ಸಿಆರ್‍ಪಿ ನೇತೃತ್ವದಲ್ಲಿ ಬಿಎಲ್‍ಓ ಅಂಗನವಾಡಿ ಕಾರ್ಯಕರ್ತರು ಹಾಗೂ ಶಿಕ್ಷಕರು ಮನೆ ಮನೆಗೆ ತೆರಳಿ ಮತದಾನದ ಮಹತ್ವ ತಿಳಿಸುತ್ತಿದ್ದಾರೆ. ಈ ಬಾರಿ ಮತದಾನ ಪ್ರಮಾಣವನ್ನು ಕಳೆದ ಬಾರಿಗಿಂತ ಶೇ.10 ರಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ ಹಾಗೂ ನೆರಳಿನ ವ್ಯವಸ್ಥೆ ಮಾಡಲಾಗುತ್ತಿದೆ. ದೂರದ ಊರುಗಳಿಗೆ ದುಡಿಯಲು ತೆರಳಿರುವವರನ್ನು ಸಹ ಸಂಬಂಧಿಗಳ ಮೂಲಕ ಕರೆತರುವ ಪ್ರಯತ್ನ ಮಾಡಲಾಗುವುದು. ಜಿಲ್ಲೆಯಲ್ಲಿ ಮತದಾನ ನಡೆಯುವ 3 ದಿನಗಳ ಮುನ್ನ ಆಮಂತ್ರಣ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆ ತೆರಳಿ ಮತಗಟ್ಟೆ ಆಗಮಿಸಿ ಮತದಾನ ಮಾಡುವಂತೆ ಕರೆ ನೀಡಲಿದ್ದಾರೆ ಎಂದರು.
ಕಳೆದ ಬಾರಿ ಸಾಹಸಿ ಜ್ಯೋತಿರಾಜ್ ಅವರನ್ನು ಜಿಲ್ಲಾ ಚುನಾವಣಾ ರಾಯಭಾರಿಯಾಗಿ ನೇಮಿಸಲಾಗಿತ್ತು. ರಾಯಭಾರಿ ಸ್ಥಾನದಿಂದ ಮುಕ್ತಗೊಳಿಸುವಂತೆ ಜ್ಯೋತಿರಾಜ್ ಸ್ವತಃ ಪತ್ರ ಬರೆದು ಕೋರಿದ್ದರಿಂದ ಅವರನ್ನು ಕೈಬಿಡಲಾಗಿದೆ. ಹಿರಿಯೂರಿನ ಕಾಮಿಡಿಯನ್ ಬರ್ಕತ್ ಅಲಿ ಅವರನ್ನು ಈ ಬಾರಿ ಜಿಲ್ಲಾ ಚುನಾವಣಾ ರಾಯಭಾರಿಯಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *