ಖಾಸಗಿ ಜಮೀನಿನ ಬಂಡಿದಾರಿ ಕಾಲುದಾರಿಗಳ ಒತ್ತುವರಿ ತೆರವುಗೊಳಿಸಿ- ರಾಜ್ಯ ಸರ್ಕಾರ ಖಡಕ್ ಆದೇಶ ಹೊರಡಿಸಿದ ಅಧೀನ ಕಾರ್ಯದರ್ಶಿ ವಿಮಲಮ್ಮ

by | 21/10/23 | ಕೃಷಿ

ಬೆಂಗಳೂರು: ರಾಜ್ಯದ ಅನೇಕ ರೈತರು ತಮ್ಮ ಜಮೀನುಗಳಿಗೆ ತೆರಳೋದಕ್ಕೆ ಕಾಲು ದಾರಿ, ಬಂಡಿದಾರಿಗಳನ್ನು ಅವಲಂಬಿಸಿದ್ದಾರೆ. ಆದ್ರೇ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕಾರಣ ಈ ದಾರಿ ನಕಾಸೆಯಲ್ಲಿ ಇಲ್ಲ ಹಾಗೆ ಹೀಗೆ ಅಂತ ಅದಕ್ಕೂ ತಡೆ ಒಡ್ಡಿರೋ ಘಟನೆಗಳು ನಡೆದಿವೆ. ಇಂತಹ ಖಾಸಗಿ ಜಮೀನಿನ ಬಂಡಿದಾರಿ, ಕಾಲುದಾರಿಗಳ ಒತ್ತುವರಿ ತೆರವುಗೊಳಿಸಲು ರಾಜ್ಯ ಸರ್ಕಾರ ಖಡಕ್ ಆದೇಶ ಹೊರಡಿಸಿದೆ. ಈ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿಮಲಮ್ಮ.ಸಿ ಅವರು ಸುತ್ತೋಲೆಯನ್ನು ಎಲ್ಲಾ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳಿಗೆ, ಕಂದಾಯ ಆಯುಕ್ತರಿಗೆ ಹೊರಡಿಸಿದ್ದಾರೆ. ಅದರಲ್ಲಿ ರಾಜ್ಯದಲ್ಲಿ ರೈತರು ವ್ಯವಸಾಯದ ಉದ್ದೇಶಗಳಿಗಾಗಿ ಬಳಸುವ ಕೃಷಿ ಸಲಕರಣೆಗಳನ್ನು ಸಾಗಿಸಲು ಅನ್ಯ ಭೂಮಾಲೀಕರ ಖಾಸಗಿ ಜಮೀನುಗಳಲ್ಲಿ ತಿರುಗಾಡಲು ದಾರಿ ಸಮಸ್ಯೆ ಇದ್ದು, ಬಳಕೆದಾರರ ರೈತರುಗಳಿಗೆ ತೊಂದರೆಗಳಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಅಂತ ಹೇಳಿದ್ದಾರೆ.

ದಾರಿ ಸಮಸ್ಯೆ ಬಹುಕಾಲದಿಂದಲೂ ಇದ್ದು, ಅಕ್ಕಪಕ್ಕದ ಜಮೀನುಗಳ ರೈತರು ಕೆಲವು ಖಾಸಗಿ ಜಮೀನುಗಳನ್ನು ದಾಟಿಕೊಂಡು, ಕೃಷಿ ಪೂರಕ ಚಟುವಟಿಕೆಗಳನ್ನು ಜರುಗಿಸಲು ಹಾಗೂ ಬೆಳೆದ ಫಸಲನ್ನು ಹೊರತರಲಾಗದೇ ನಷ್ಟ ಹೊಂದುತ್ತಿರುವುದು ಕೇವಲ ಮಾಧ್ಯಮಗಳಿಂದ ತಿಳಿದು ಬಂದಿರುತ್ತದೆ. ಈ ಬಗ್ಗೆ ಸಾರ್ವಜನಿಕರಿಂದ ಮನವಿ ಹಾಗೂ ದೂರುಗಳು ಸ್ವೀಕೃತವಾಗಿರುತ್ತವೆ ಎಂದಿದ್ದಾರೆ.

ಗ್ರಾಮ ನಕಾಶೆ ಕಂಡ ದಾರಿಗಳಲ್ಲಿ ಬಳಕೆದಾರ ರೈತರು ತಿರುಗಾಡಲು ಅವಕಾಶವಿದ್ದಾಗ್ಯೂ ಕೆಲವು ಭೂಮಾಲೀಕರು ಬಳಕೆದಾರ ರೈತರುಗಳಿಗೆ ತಿರುಗಾಡಲು ಅಡ್ಡಿಪಡಿಸುತ್ತಿರುವುದು ಕಂಡು ಬಂದಿರುತ್ತದೆ. ಅಂತಹ ಜಾಗಗಳನ್ನು ಮುಚ್ಚಿರುವುದು, ರೈತರು ಬಹುಕಾಲದಿಂದಲೂ ಬಳಸುವ ದಾರಿಗಳಲ್ಲಿ ತಿರುಗಾಡಲು ಕೆಲವು ರೈತರು ಮಧ್ಯದ ವೈಯಕ್ತಿಕ ದ್ವೇಷ, ಅಸೂಯೆಗಳು ಮತ್ತು ಹೊಂದಾಣಿಕೆಯ ಕೊರತೆಯಿಂದಾಗಿ ಬಳಕೆದಾರ ರೈತರ ತೊಂದರೆಗಳಿಗೆ ಬಹುತೇಕ ಕಾರಣಗಳಾಗಿರುವುದು ಕಂಡು ಬರುತ್ತದೆ ಎಂದು ಹೇಳಿದ್ದಾರೆ.

ಈ ಎಲ್ಲಾ ಕಾರಣಗಳಿಂದ ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 59ರಲ್ಲಿ ದಾರಿಯ ಹಕ್ಕುಗಳು ಮತ್ತು ಇತರೆ ಅನುಭೋಗದ ಹಕ್ಕುಗಳ ಬಗ್ಗೆ ತಿಳಿಸಲಾಗಿದ್ದು, ಸಂಬಂಧಪಟ್ಟ ಜಮೀನುಗಳ ಭಾಗಿದಾರರು ಒಪ್ಪಿರುವಂತಹ ಸಂದರ್ಭಗಳ ದಾಖಲೆ ರಿಜಿಸ್ಟರ್ ನಲ್ಲಿ ನಮೂದು ಮಾಡಲು ಅವಕಾಶವಿರುತ್ತದೆ ಅಂತ ತಿಳಿಸಿದ್ದಾರೆ.
ತಾಲ್ಲೂಕಿನ ತಹಶೀಲ್ದಾರರು ನಕಾಶೆ ಕಂಡ ಕಾಲುದಾರಿ, ಬಂಡಿದಾರಿ ಅಥವಾ ರಸ್ತೆಗಳಲ್ಲಿ ಅನ್ಯ ಕೃಷಿ ಬಳಕೆದಾರರು ತಿರುಗಾಡಲು ಅವಕಾಶ ನೀಡದೆ ಅಡ್ಡಿಪಡಿಸುವಂತಹ ಅಥವಾ ಬಳಸಲು ಮುಚ್ಚಿರುವಂತಹ ಸಂದರ್ಭದಲ್ಲಿ ಅವುಗಳನ್ನು ತೆರವುಗೊಳಿಸಿ, ಅಂತಹ ತಿರುಗಾಡಲು ದಾರಿಗಳನ್ನು ಸುಗಮಗೊಳಿಸಲು ಕ್ರಮವಹಿಸುವಂತೆ ಸೂಚಿಸಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *