ಖಾದಿ ಮಹೋತ್ಸವಕ್ಕೆ ಚಾಲನೆ ಸ್ಥಳೀಯ ಉತ್ಪನ್ನಗಳನ್ನು ಬಳಸಿ, ಬೆಳೆಸಿ- ಬಿ.ಟಿ.ಕುಮಾರಸ್ವಾಮಿ

by | 27/10/23 | ಸುದ್ದಿ

ಚಿತ್ರದುರ್ಗ ಅ.27:
ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಗಮನ ನೀಡದೇ, ಕಣ್ಣಿಗೆ ಆಕಷಣೀಯವಾದ ಉತ್ಪನ್ನಗಳಿಗೆ ಮಾರುಹೋಗುತ್ತಿರುವುದು ಸಮಂಜಸವಲ್ಲ. ನಾವು ನಮ್ಮದೇಯಾದ ಸ್ಥಳೀಯ ಉತ್ಪನ್ನವಾಗಿರುವ ಖಾದಿ ಬಳಸಬೇಕು ಹಾಗೂ ಬೆಳೆಸಬೇಕು. ಇದು ಆರೋಗ್ಯಕ್ಕೆ ಅನುಕೂಲ ಹಾಗೂ ಬಹಳ ಉತ್ತಮವಾದ ಉಡುಪು ಕೂಡ ಹೌದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಶುಕ್ರವಾರ ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ವತಿಯಿಂದ ಹಮ್ಮಿಕೊಂಡಿದ್ದ ಖಾದಿ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿ ಅವರು ಸ್ವದೇಶಿ ಉತ್ಪನ್ನಗಳ ಬಗ್ಗೆ, ವಿಶೇಷವಾಗಿ ಖಾದಿಯನ್ನು ಸ್ವತಃ ಬಳಕೆ ಮಾಡುವುದರ ಮೂಲಕ ಬೇರೆಯವರಿಗೆ ಬಳಸುವಂತೆ ಮಾರ್ಗದರ್ಶನ ನೀಡಿದ್ದಾರೆ. ಖಾದಿ ಬಳಕೆಯಿಂದ ಸ್ಥಳೀಯ ರೈತರು ಬೆಳೆದ ಹತ್ತಿ ಬೆಳೆಗೆ ಉತ್ತಮ ಬೆಲೆ ಹಾಗೂ ಮಾರುಕಟ್ಟೆಯ ಸೌಲಭ್ಯಕ್ಕೆ ಅವಕಾಶ ಕಲ್ಪಿಸಿದಂತಾಗುತ್ತದೆ. ದುಡಿಯುವ ಕೈಗೆ ಕೆಲಸವೂ ದೊರೆಯಲಿದೆ. ಈ ಹಿನ್ನಲೆಯಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ಪ್ರತಿಯೊಬ್ಬರಿಗೂ ಖಾದಿ ಬಳಕೆ ಮಹತ್ವದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದ ಅವರು, ಗಾಂಧೀಜಿ ಮಾರ್ಗದರ್ಶನದಲ್ಲಿ ಖಾದಿ ಬಳಕೆ ಹಾಗೂ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಆದ್ಯತೆ ನೀಡಬೇಕು ಎಂದರು.
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಸಿಇಒ ರಾಜಣ್ಣ ಮಾತನಾಡಿ, ಖಾದಿ ಆರಂಭವಾಗಿರುವುದು ನಮ್ಮ ದೇಶದಲ್ಲಿ ಮಾತ್ರ. ಖಾದಿ ಅಂದರೆ ಮನುಷ್ಯನೇ ತಯಾರು ಮಾಡಿರುವಂತಹ ಉತ್ಪನ್ನಗಳಾಗಿವೆ. ಖಾದಿ ಉತ್ಪನ್ನದ ಹಿಂದೆ ಶ್ರಮಿಕರ ಬೆವರು, ಶ್ರಮ ಇದೆ. ಖಾದಿ ಎಂಬುದು ಇಡೀ ಪ್ರಪಂಚದಲ್ಲಿಯೇ ವಿಶಿಷ್ಟವಾದ ಹಾಗೂ ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಆರಂಭ ಮಾಡಿರುವುದೇ ಖಾದಿ ಚಳುವಳಿ. ಖಾದಿಯಿಂದ ಆರಂಭವಾದ ಚಳುವಳಿಯು 1947ರಲ್ಲಿ ಬ್ರಿಟೀಷರಿಂದ ಸ್ವಾತಂತ್ರ್ಯ ಗಳಿಸುವುದರೊಂದಿಗೆ ಅತ್ಯುನ್ನತ ಗುರಿ ಸಾರ್ಥಕಗೊಳಿಸಲು ಖಾದಿ ನಮಗೆ ಸಹಾಯ ಮಾಡಿತು. ಈ ಹಿನ್ನಲೆಯಲ್ಲಿ ಖಾದಿಗೆ ವಿಶೇಷ ಗೌರವಕೊಟ್ಟು ಸರ್ಕಾರ ಈ ಕಾರ್ಯಕ್ರಮ ಆಯೋಜಿಸಿದ್ದು, ಅಕ್ಟೋಬರ್ 02 ರಿಂದ 31 ರವರೆಗೆ ಖಾದಿ ಮಹೋತ್ಸವವನ್ನು ದೇಶದಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದರು.
ಖಾದಿ ಬಳಕೆಯಿಂದ ನಮಗೆ ಉಷ್ಣ, ಶೀತದಿಂದಲೂ ರಕ್ಷಣೆ ದೊರೆಯಲಿದೆ. ಹಾಗಾಗಿ ನಾವೆಲ್ಲರೂ ಖಾದಿಯನ್ನು ಹೆಚ್ಚಾಗಿ ಪ್ರೋತ್ಸಾಹ ಮಾಡಬೇಕು. “ದೇಶಕ್ಕಾಗಿ ಖಾದಿ, ಅಲಂಕಾರಕ್ಕಾಗಿ ಖಾದಿ” ಎಂಬ ವಿಷಯವನ್ನು ಸಾರ್ವಜನಿಕರಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದರು.
ಖಾದಿ ಅಂದರೆ ಸರಳತೆ, ಸ್ವಾವಲಂಬನೆ, ಸಂಯಮ, ರಾಷ್ಟ್ರೀಯತೆ ಎಂದು ತಿಳಿಸಿದ ಅವರು, ಖಾದಿಗೆ ಹೆಚ್ಚಿನ ಮಹತ್ವ ಕೊಡಬೇಕು. ಖಾದಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ. ಕುಮಾರಸ್ವಾಮಿ ಮಾತನಾಡಿ, ಖಾದಿಯ ಬಳಕೆ, ಮಹತ್ವದ ಕುರಿತು ಜನರಿಗೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ. ನಾವುಗಳು ಒಮ್ಮೆ ಖಾದಿಯನ್ನು ಬಳಕೆ ಮಾಡಿದರೆ, ನಮಗೆ ಖಾದಿ ಬಿಟ್ಟು ಬೇರೆ ಉತ್ಪನ್ನ ಬಳಕೆ ಮಾಡುವುದು ಬೇಡ ಎಂಬ ಮನಸ್ಥಿತಿ ಬರಲಿದೆ. ಖಾದಿ ಬಳಕೆಯ ಮಹತ್ವ ಎಲ್ಲರಿಗೂ ತಿಳಿಸಿ ಖಾದಿ ಉಪಯೋಗಿಸಲು ಪ್ರಯತ್ನಿಸಬೇಕು ಎಂದರು.

ಖಾದಿ ಜಾಗೃತಿ ಜಾಥಾಕ್ಕೆ ಚಾಲನೆ:
************
ಖಾದಿ ಮಹೋತ್ಸವದ ಅಂಗವಾಗಿ ಖಾದಿ ಜಾಗೃತಿ ಜಾಥಾಕ್ಕೆ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಚಾಲನೆ ನೀಡಲಾಯಿತು.
ಖಾದಿ ಮಹೋತ್ಸವದ ಪ್ರತಿಜ್ಞೆ ಸ್ವೀಕರಿಸಿ, ನಂತರ ಖಾದಿ ಜಾಗೃತಿ ಜಾಥಾವು ನಗರದ ಮುಖ್ಯರಸ್ತೆಯ ಮಾರ್ಗವಾಗಿ ಮದಕರಿ ವೃತ್ತ, ಗಾಂಧಿ ವೃತ್ತದವರೆಗೂ ಜಾಥಾ ನಡೆಸಿ, ಜಿಲ್ಲಾಧಿಕಾರಿ ಕಚೇರಿ ವೃತ್ತದವರೆಗೂ ನಡೆಯಿತು.
“ಖಾದಿ ಖರೀದಿಸಿ”, “ಸ್ವಾವಲಂಭಿ ಭಾರತ”, “ಆತ್ಮನಿರ್ಭರ ಭಾರತ”, “ಸ್ಥಳೀಯ ಉತ್ಪನ್ನಗಳಿಗ ನಮ್ಮ ಧ್ವನಿ” “ಬಿ ವೋಕಲ್ ಫಾರ್ ಲೋಕಲ್” ಎಂಬ ಫಲಕಗಳ ಮೂಲಕ ಜಾಗೃತಿ ಜಾಥಾದಲ್ಲಿ ಕಾಲೇಜು ವಿದ್ಯಾರ್ಥಿಗಳು, ಖಾದಿ ಸಂಸ್ಥೆಗಳ ಕುಶಲಕರ್ಮಿಗಳು, ಎನ್‍ಎಸ್‍ಎಸ್, ಖಾದಿ ಅಭಿಮಾನಿಗಳು ಖಾದಿ ಬಳಕೆಯ ಮಹತ್ವ ಸಾರಿದರು.
ಗಾಂಧಿವಾದಿ ಹೆಚ್.ಕೆ.ಎಸ್ ಸ್ವಾಮಿ ಅವರು ಚರಕದ ಮೂಲಕ ಹತ್ತಿಯಿಂದ ನೂಲನ್ನು ತೆಗೆಯುವ ಕುರಿತು ಪ್ರಾತ್ಯಕ್ಷಿಕೆ ತೋರಿಸಿಕೊಟ್ಟರು.
ಈ ಸಂದರ್ಭದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಉಪನಿರ್ದೇಶಕ ಸೆಂಥಿಲ್ ರಾಮಸ್ವಾಮಿ, ಎನ್‍ಎಸ್‍ಎಸ್ ನೋಡಲ್ ಅಧಿಕಾರಿ ಲೋಕೇಶ್ ಸೇರಿದಂತೆ ಇತರರು ಇದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *