ಕ್ರೀಡಾಪಟುಗಳ ನೇರನೇಮಕಾತಿಗೆ ಮುಂದಿನ ಸಚಿವ ಸಂಪುಟದಲ್ಲಿ ಅನುಮೋದನೆ ಒಲಂಪಿಕ್ಸ್ ಹಾಗೂ ಪ್ಯಾರಾ ಒಲಂಪಿಕ್ಸ್ ಪದಕ ವಿಜೇತರಿಗೆ ಗ್ರೂಪ್ ಎ ಉದ್ಯೋಗ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

by | 06/12/22 | ಸುದ್ದಿ

ಬೆಂಗಳೂರು: ಕ್ರೀಡಾ ಇಲಾಖೆಯ ಆಪರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಆಯ್ಕೆ ಸಮಿತಿಯ ಮೂಲಕ ಕ್ರೀಡಾಪಟುಗಳಿಗೆ ನೇರ ನೇಮಕಾತಿ ಮೂಲಕ ಸರ್ಕಾರಿ ಉದ್ಯೋಗ ನೀಡುವ ಯೋಜನೆಗೆ ಮುಂದಿನ ಸಚಿವಸಂಪುಟದಲ್ಲಿ ಅನುಮೋದನೆ ನೀಡಿ, ಪದವೀಧರರಾದ ಒಲಂಪಿಕ್ಸ್ ಹಾಗೂ ಪ್ಯಾರಾಒಲಂಪಿಕ್ಸ್ ಪದಕ ವಿಜೇತರಿಗೆ ಗ್ರೂಪ್ ಎ ಉದ್ಯೋಗ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ಏಕಲವ್ಯ ಕ್ರೀಡಾ ಪ್ರಶಸ್ತಿ ಹಾಗೂ ಇತರ ಕ್ರೀಡಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದರು.

ಪದವೀಧರರಾಗಿರುವ ಏಷಿಯನ್ ಗೇಮ್ಸ್ ಹಾಗೂ ಕಾಮನ್ ವೆಲ್ತ್ ಪದಕ ವಿಜೇತರಿಗೆ ಗ್ರೂಪ್ ಬಿ ಉದ್ಯೋಗ, ಇದಕ್ಕಿಂತ ಕಡಿಮೆ ಸ್ತರದ ಕ್ರೀಡಾಕೂಟದ ಪದಕವಿಜೇತರಿಗೆ ಗ್ರೂಪ್ ಸಿ ಹಾಗೂ ಗ್ರೂಪ್ ಡಿ ಉದ್ಯೋಗವನ್ನು ನೀಡಲಾಗುವುದು. ಕ್ರೀಡಾಪಟುಗಳಿಗೆ ಸರ್ಕಾರದ ಉದ್ಯೋಗ ನೀಡುವ ನೀತಿ ಕರ್ನಾಟಕದ ಹೊರತು ಬೇರೆ ಯಾವುದೇ ರಾಜ್ಯದಲ್ಲಿಲ್ಲ ಎಂದರು.

ರಾಜ್ಯ ಸರ್ಕಾರದಿಂದ 75 ಕ್ರೀಡಾಪಟುಗಳಿಗೆ ತರಬೇತಿ :

ಕಳೆದ ಆಗಸ್ಟ್ 15 ರಂದು 75 ಕ್ರೀಡಾಪಟುಗಳನ್ನು ದತ್ತುಪಡೆದು, ಮುಂದಿನ ಪ್ಯಾರೀಸ್ ಒಲಂಪಿಕ್ಸ್ ನಲ್ಲಿ ಭಾಗವಹಿಸಲು ತರಬೇತಿ ನೀಡಲಾಗುತ್ತಿದೆ. 4 ವರ್ಷದ ತರಬೇತಿ, ಉತ್ತಮ ತರಬೇತಿದಾರರು, ಶಾಲಾ ವ್ಯವಸ್ಥೆಗಳನ್ನು ಒದಗಿಸಲಾಗುತ್ತಿದೆ. ಇದಕ್ಕಾಗಿ 10 ಲಕ್ಷ ವಿನಿಯೋಗಿಸಲಾಗಿದ್ದು, ಅವಶ್ಯಕತೆಗೆ ಅನುಸಾರ ಇನ್ನೂ ಹೆಚ್ಚಿನ ಅನುದಾನವನ್ನು ಒದಗಿಸಲಾಗುವುದು. ಕಾಮನ್ ವೆಲ್ತ್, ಏಷಿಯನ್ ಗೇಮ್ಸ್, ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ನಮ್ಮ ಕ್ರೀಡಾಪಟುಗಳು ಉತ್ತಮ ಸಾಧನೆಗಳನ್ನು ಮಾಡಬೇಕು ಎಂದರು.

ಕ್ರೀಡೆ ರಾಷ್ಟ್ರೀಯ ಸಂಕೇತವಾಗುತ್ತಿದೆ :

ಯುವ ಕ್ರೀಡಾ ಪ್ರತಿಭೆಗಳು ದೇಶದ ಆಸ್ತಿ. ಏಕಾಗ್ರತೆ, ಹಾಗೂ ಪರಿಶ್ರಮದಿಂದ ಸಾಧನೆ ಮಾಡಿದರೆ ಯಶಸ್ಸು ಖಂಡಿತ ಲಭಿಸುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರೀಡೆಗೆ ಮಹತ್ವವನ್ನು ನೀಡಿದೆ. ಕ್ರೀಡೆ ಹವ್ಯಾಸವಾಗಿ ಪ್ರಾರಂಭವಾಗಿ ರಾಷ್ಟ್ರೀಯ ಸಂಕೇತವಾಗಿ ಇತ್ತೀಚೆಗೆ ಪರಿಗಣಿಸಲಾಗುತ್ತಿದೆ. ಒಂದು ರಾಷ್ಟ್ರವನ್ನು ಅದರ ಕ್ರೀಡಾ ಸಾಧನೆಯ ಮೇಲೆ ಗುರುತಿಸಲಾಗುತ್ತಿದೆ. ಭಾರತದಂತಹ ರಾಷ್ಟ್ರದಲ್ಲಿ ಕ್ರೀಡೆಯನ್ನು ಮುಖ್ಯವಾಹಿನಿಗೆ ತರಲು ಪ್ರಧಾನಿ ಮೋದಿಯವರು ಯಶಸ್ವಿ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಖೇಲೋ ಇಂಡಿಯಾ, ಫಿಟ್ ಇಂಡಿಯಾ, ಜೀತೋ ಇಂಡಿಯಾ ಎಂಬ ಕಾರ್ಯಕ್ರಮಗಳ ಮೂಲಕ ಕ್ರೀಡೆಗಳ ಬಗ್ಗೆ ಜಾಗೃತಿ ಮೂಡಿದೆ. ಇದರ ಪರಿಣಾಮವಾಗಿ ಹಿಂದಿನ ಒಲಂಪಿಕ್ಸ್ ನಲ್ಲಿ ಭಾರತ ಹೆಚ್ಚಿನ ಪದಕಗಳನ್ನು ಗೆಲ್ಲುವಂತಾಯಿತು. ಪ್ಯಾರಾ ಒಲಂಪಿಕ್ಸ್ ನಲ್ಲಿಯೂ ಭಾರತ ಮಹತ್ತರ ಸಾಧನೆಗಳನ್ನು ಮಾಡಿದೆ. ಇದಕ್ಕಾಗಿ ಎಲ್ಲ ಕ್ರೀಡಾಸಾಧಕರನ್ನು ಅಭಿನಂದಿಸುತ್ತೇನೆ ಎಂದರು.

ಯುವಜನತೆಯ ಸಬಲೀಕರಣ ಹಾಗೂ ಕ್ರೀಡಾ ಬೆಳವಣಿಗೆಗೆ ಯುವನೀತಿ :

ಮುಂದಿನ ದಿನಗಳಲ್ಲಿ ಯುವನೀತಿಯನ್ನು ತರಲಾಗುವುದು. ಯುವಜನತೆಯ ಸಬಲೀಕರಣ ಹಾಗೂ ಕ್ರೀಡಾ ಬೆಳವಣಿಗೆ ಪ್ರಮುಖವಾಗಿದ್ದು, ಇವೆರಡಕ್ಕೂ ಸಮಾನ ಮಹತ್ವವನ್ನು ನೀಡುವಂತಹ ನೀತಿಯನ್ನು ರೂಪಿಸಲಾಗುತ್ತಿದೆ.ಕ್ರೀಡೆಗೆ ದೇಹದ ಹಾಗೂ ಮನಸ್ಸಿನ ಆರೋಗ್ಯದ ಜೊತೆಗೆ ಗೆಲ್ಲಲೇಬೇಕೆಂದು ಆಡುವುದು ಬಹಳ ಮುಖ್ಯ. ಕೇವಲ ಸೋಲಬಾರದು ಎಂದು ಆಡುವ ಭಾವನೆ ಕ್ರೀಡಾಪಟುಗಳಲ್ಲಿರಬಾರದು. ಗೆಲ್ಲಲೇಬೇಕೆಂಬ ಸಕಾರಾತ್ಮಕ ಭಾವನೆಯಿಂದ ಆಡಿದರೆ ಗೆಲುವು ನಿಮ್ಮದಾಗುತ್ತದೆ. ರಾಜ್ಯ ಸರ್ಕಾರ ಕ್ರೀಡೆಗಳಿಗೆ, ಕ್ರೀಡಾಪಟುಗಳಿಗೆ ಬಹಳ ಮಹತ್ವ ನೀಡುತ್ತಿದೆ. ಗೃಹ ಇಲಾಖೆಯ ಉದ್ಯೋಗಗಳಲ್ಲಿ ಕ್ರೀಡಾಪಟುಗಳಿಗೆ ಶೇ.2 ರ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ. ರಾಜ್ಯ ಸರ್ಕಾರದಲ್ಲಿ ಕ್ರೀಡೆಗಳಿಗೆ ಪ್ರಾಶಸ್ತ್ಯ ನೀಡುವ ನಾಯಕರು, ಆಡಳಿತಗಾರರು ನಮ್ಮಲ್ಲಿದ್ದಾರೆ. ಇದರಿಂದಾಗಿ ಕ್ರೀಡೆಗೆ ಉತ್ತೇಜನ ನೀಡುವಂತಹ ನೀತಿಗಳನ್ನು ಜಾರಿಗೆ ತರಲು ಸಾಧ್ಯವಾಗಿದೆ ಎಂದರು.

ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ:

ಗ್ರಾಮಗಳಲ್ಲಿ ನಿಜವಾದ ಕ್ರೀಡಾಪ್ರತಿಭೆಗಳಿದ್ದು, ಅವರಿಗೆ ಸೂಕ್ತ ತರಬೇತಿ ನೀಡಿದ್ದಲ್ಲಿ ಮಹತ್ತರ ಸಾಧನೆಗಳನ್ನು ಮಾಡಲು ಶಕ್ತರಾಗಿರುತ್ತಾರೆ. ಆದ್ದರಿಂದ ಗ್ರಾಮ, ತಾಲ್ಲೂಕು, ಜಿಲ್ಲಾಪಂಚಾಯತಿ ಹಂತಗಳಲ್ಲಿ ಗ್ರಾಮೀಣ ಕ್ರೀಡಾಕೂಟವನ್ನು ಈ ವರ್ಷದಿಂದ ಪ್ರಾರಂಭಿಸಲಾಗಿದ್ದು, ಕೋಕೋ, ಕಬ್ಬಡ್ಡಿ, ಕುಸ್ತಿ, ವಾಲಿಬಾಲ್, ಕಂಬಳ ದಂತಹ ಕ್ರೀಡೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಕ್ರೀಡೆಗಳಲ್ಲಿ ತೊಡಗಿದವರು ಹೆಚ್ಚಾಗಿ ಕ್ರೀಡಾ ಮನೋಭಾವವನ್ನು ಹೊಂದಿದವರಾಗಿರುತ್ತಾರೆ. ಇಂತಹ ಕ್ರೀಡಾಪಟುಗಳು ಸೋಲನ್ನೂ ಸಹ ಗೆಲುವಿಗೆ ಪರಿವರ್ತಿಸಲು ಶ್ರಮಿಸುತ್ತಾರೆ. ಸೋಲಿಗೆ ಹೆದರುವ ಸ್ವಭಾವದವರಲ್ಲ. ಕ್ರೀಡಾಸಾಧಕರ ಬೆಂಬಲವಾಗಿ ಅವರ ಕುಟುಂಬ ವರ್ಗದವರು, ತರಬೇತುದಾರರ ಪರಿಶ್ರಮವೂ ಇರುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣ ಗೌಡ, ಶಾಸಕ ರಿಜ್ವಾನ್ ಅರ್ಷದ್, ಕರ್ನಾಟಕ ಓಲಿಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜು, ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮೊದಲಾದವರು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *