ಕೈಗಾರಿಕೆಗಳ ಪ್ರತಿನಿಧಿಗಳೊಂದಿಗೆ ಸಭೆ — ನಿಯಮ ಪಾಲನೆ ಮಾಡದ ಕೈಗಾರಿಕೆಗಳ ವಿರುದ್ಧ ಕಠಿಣ ಕ್ರಮ: ಎಂ.ಸುಂದರೇಶ ಬಾಬು —

by | 06/02/23 | ಸುದ್ದಿ

Share
Tooltip Textಕೊಪ್ಪಳ ಫೆಬ್ರವರಿ 06 ನಿಯಮ ಪಾಲನೆ
ಮಾಡದೇ ವಾಯು ಮಾಲಿನ್ಯಕ್ಕೆ ಅವಕಾಶ ಕಲ್ಪಿಸಿದಲ್ಲಿ ಅಂತಹ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪಳ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರು ವಿವಿಧ ಕೈಗಾರಿಕೆಗಳ ಪ್ರತಿನಿಧಿಗಳಿಗೆ ಸೂಚನೆ ನೀಡಿದರು.
ಸ್ಪಾಂಜ್ ಐರನ್ ಘಟಕಗಳಿಂದ ವಾಯು ಮಾಲಿನ್ಯ ಉಂಟಾಗುತ್ತಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ತಾಂತ್ರಿಕ ತಂಡಗಳು, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಮತ್ತು ಸ್ಪಾಂಜ್ ಐರನ್ ಕೈಗಾರಿಕೆಗಳ ವ್ಯವಸ್ಥಾಪಕರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಫೆಬ್ರವರಿ 06 ರಂದು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಪ್ಪಳ ಜಿಲ್ಲೆಯ ಹಿರೇಬಗನಾಳ, ಹಾಲವರ್ತಿ ಹಾಗೂ ಕೆರೆಹಳ್ಳಿಗಳ ಪ್ರದೇಶದಲ್ಲಿರುವ 13 ಸ್ಪಾಂಜ್ ಐರನ್ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತಕ್ಕೆ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರಂತರವಾಗಿ ದೂರುಗಳು ದಾಖಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪರಿಸರ ಅಧಿಕಾರಿಗಳು ಕಾಲಕಾಲಕ್ಕೆ ಪರಿವೀಕ್ಷಣೆ ಕೈಗೊಳ್ಳುತ್ತಿದ್ದು, ಕೆಲವು ಕೈಗಾರಿಕೆ ಘಟಕಗಳಿಗೆ ಹಲವಾರು ನೋಟೀಸ್‌ಗಳನ್ನು ನೀಡಿ ಮಾಲಿನ್ಯ ನಿಯಂತ್ರಣ ಉಪಕರಣಗಳನ್ನು ಸರಿಪಡಿಸಿಕೊಳ್ಳಲು ಸೂಚಿಸಲಾಗಿರುತ್ತದೆ ಮತ್ತು ಅಂತಹ ಘಟಕಗಳಿಗೆ ಪ್ರಸ್ತಾವಿತ ಮುಚ್ಚುವ ಆದೇಶವನ್ನು ನೀಡಲಾಗಿರುತ್ತದೆ ಎಂದು ಹೇಳಿದರು.
ಅಧಿಕಾರಿಗಳಿಗೆ ನಿರ್ದೇಶಕನ: ಈಗಾಗಲೇ ಜಿಲ್ಲಾ ಮಟ್ಟದ ಅಧಿಕಾರಿಗಳನ್ನೊಳಗೊಂಡ 07 ತಾಂತ್ರಿಕ ತಂಡಗಳು ರಚಿಸಲಾಗಿದ್ದು, ಈ ಎಲ್ಲಾ ತಂಡಗಳು ಕೊಪ್ಪಳ ಜಿಲ್ಲೆ ವ್ಯಾಪ್ತಿಯಲಿರುವ ಎಲ್ಲಾ ಸ್ಪಾಂಜ್ ಐರನ್ ಕೈಗಾರಿಕೆ ಘಟಕಗಳಿಗೆ ಕಡ್ಡಾಯವಾಗಿ ಪ್ರತಿ ವಾರಕ್ಕೊಮ್ಮೆ ಖುದ್ದಾಗಿ ಭೇಟಿ ನೀಡಬೇಕು. ಕೈಗಾರಿಕೆ ಘಟಕಗಳಲ್ಲಿ ವಾಯು ಮಾಲಿನ್ಯ ನಿಯಂತ್ರಣ ಉಪಕರಣಗಳ ಕಾರ್ಯಕ್ಷಮತೆ ಮತ್ತು ದತ್ತಾಂಶಗಳನ್ನು ಪರಿಶೀಲಿಸಿ ವರದಿಯನ್ನು ನೀಡುವಂತೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಎಲ್ಲಾ ಕೈಗಾರಿಕೆಗಳು ರಾತ್ರಿ ವೇಳೆಯಲ್ಲಿ ಧೂಳು ಹೊರಸೂಸುತ್ತಿರುವುದು ಕಂಡುಬಂದಿದ್ದು, ಮಾಲಿನ್ಯ ನಿಯಂತ್ರಣ ಉಪಕರಣಗಳಾದ ಸ್ಥಾಯಿ ವಿದ್ಯುತ್ ಅವಕ್ಷೇಪಕ (ಇಎಸ್ಪಿ) ಬ್ಯಾಗ್ ಫಿಲ್ಟರ್‌ಗಳನ್ನು ಸ್ಥಗೀತಗೊಳಿಸಿ ಕಾರ್ಯನಿರ್ವಹಿಸುತ್ತಿದ್ದು ಕಂಡುಬಂದಿರುತ್ತದೆ ಮತ್ತು ಚಿಮಣಿಯ ಪಕ್ಕದಲ್ಲಿ ಅಳವಡಿಸಿರುವ ಮುಚ್ಚಳಿಕೆ (ಲಿಡ್ ಕ್ಯಾಪ್)ಯನ್ನು ತೆರೆದು ಬೈಪಾಸ್ ಮಾಡುತ್ತಿರುವುದು, ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸದೇ ಹಾಗೂ ಧೂಳು ನಿಯಂತ್ರಿಸಲು ನೀರು ಸಿಂಪಡಣೆ ಮಾಡದೇ ವಾಯು ಮಾಲಿನ್ಯಕ್ಕೆ ಕಾರಣವಾಗಿರುತ್ತಾರೆ ಎಂದು ಪರಿಸರ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಎಲ್ಲಾ ಕೈಗಾರಿಕೆಗಳು ಈ ತಕ್ಷಣ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಗದಿಪಡಿಸಿದ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಅಲ್ಲದೇ ಮಾಲಿನ್ಯ ನಿಯಂತ್ರಣ ಉಪಕರಣಗಳನ್ನು ಕಡ್ಡಾಯವಾಗಿ ಸರಿಪಡಿಸಿಕೊಂಡು ಕೈಗಾರಿಕೆಗಳು ವಾಯು ಮಾಲಿನ್ಯವಾಗದಂತೆ ಕಾರ್ಯಾಚರಣೆಯನ್ನು ನಿರ್ವಹಿಸಬೇಕು. ಇಲ್ಲವಾದ್ದಲ್ಲಿ ಅಂತಹ ಕೈಗಾರಿಕೆಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿಗಳಾದ ಬಸವಣ್ಣೆಪ್ಪ ಕಲಶೆಟ್ಟಿ, ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕರಾದ ಎಸ್.ಚೌವ್ಹಾಣ, ಜಿಲ್ಲಾ ಪರಿಸರ ಅಧಿಕಾರಿಗಳಾದ ಎಸ್.ಸಿ ಸುರೇಶ, ಆಹಾರ ಇಲಾಖೆ ಉಪನಿರ್ದೇಶಕರಾದ ಮಲ್ಲಿಕಾರ್ಜುನ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳಾದ ಪ್ರಾಣೇಶ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸ್ಪಾಂಜ್ ಐರನ್ ಕೈಗಾರಿಕೆಗಳ ವ್ಯವಸ್ಥಾಪಕರು, ಪ್ರತಿನಿಧಿಗಳು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *