ಚಳ್ಳಕೆರೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಳಿಸುವಲ್ಲಿ ರಾಜಕೀಯ ಮಾಡುತ್ತ ಕಾಲಹರಣ ಮಾಡುತ್ತಿದ್ದು ಚಿತ್ರದುರ್ಗ ಜಿಲ್ಲೆಯ ಬರಪೀಡಿತ ತಾಲೂಕುಗಳಾದ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳ ರೈತರು ಸಂಕಷ್ಟಕ್ಕೆ ಸಿಲುಕಿದ್ದು ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಮಧ್ಯ ಕರ್ನಾಟಕದ ಬರದ ನಾಡಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆಯ ತಾಲೂಕು ಗೌರವಾಧ್ಯಕ್ಷ ಎಂ ಎನ್ ಚನ್ನಕೇಶವಮೂರ್ತಿ ಒತ್ತಾಯಿಸಿದರು.
ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ವೀಕ್ಷಣೆಗಾಗಿ ದೇವರ ಮರುಕುಂಟೆ ಗ್ರಾಮದ ರೈತರ ನಿಯೋಗ ತೆರಳುವ ವೇಳೆ ನಗರದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ಮಳೆ ಬೀಳುವ ತಾಲೂಕು ಎಂಬ ಹಣೆಪಟ್ಟಿಯನ್ನು ಚಳ್ಳಕೆರೆ ತಾಲೂಕು ಕಟ್ಟಿಕೊಂಡಿದ್ದು ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾದಲ್ಲಿ ಈ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಕೇಂದ್ರ ಸರ್ಕಾರ ಈಗಾಗಲೇ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಲು ನಿರ್ಧರಿಸಿದ್ದು 5300 ಕೋಟಿ ಹಣವನ್ನು ಸಹ ಬಜೆಟ್ ನಲ್ಲಿ ಘೋಷಿಸಿ ಇದುವರೆಗೂ ಬಿಡುಗಡೆಗೊಳಿಸದೆ ಇರುವುದರಿಂದ ತಾಲೂಕಿನ ರೈತರಿಗೆ ಭದ್ರ ಮೇಲ್ದಂಡೆ ಯೋಜನೆ ಇನ್ನು ಕನಸಾಗಿಯೇ ಉಳಿದಿದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ರಾಜಕೀಯ ದೊಂಬರಾಟಗಳನ್ನು ನಿಲ್ಲಿಸಿ. ರೈತರ ನೆರವಿಗೆ ಧಾವಿಸಬೇಕು ನಮ್ಮ ನಿಯೋಗವು ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವೀಕ್ಷಣೆಗೆ ತೆರಳುತ್ತಿದ್ದು ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲನೆ ನಡೆಸಿದ ನಂತರ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ರೈತ ಸಂಘಟನೆಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾಹಿತಿ ತಿಪ್ಪಣ್ಣ ಮರಿಕುಂಟೆ ರೈತ ಮುಖಂಡರಾದ ಬೂಲಿಂಗಪ್ಪ ಹೆಚ್ ಡಿ ಮಂಜು ಮಹಾಂತೇಶ್ ಬಸವರಾಜ್ ವಿಶ್ವ ಹನುಮಂತರಾಯ ವಿಜಯ್ ಮಲ್ಲಿಕಾರ್ಜುನ ಪೂಜಾರಿ ಗೋವಿಂದಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
0 Comments