ಚಿತ್ರದುರ್ಗ :
ಕುಂಚಿಟಿಗರಿಗೆ ತ್ವರಿತವಾಗಿ ಕೇಂದ್ರ ಸರ್ಕಾರ ಓಬಿಸಿ ಮೀಸಲಾತಿ ಸೌಲಭ್ಯ ಕಲ್ಪಿಸುವ ಮೂಲಕ ಅನ್ಯಾಯವಾಗಿರುವ ಕುಂಚಿಟಿಗರ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂಬುದಾಗಿ ಕುಂಚಿಟಿಗ ಕುಲಶಾಸ್ತ್ರ ಅಧ್ಯಯನಕಾರ ಹಾಗೂ ಕುಂಚಿಟಿಗರ ಸಮಾಜದ ಮುಖಂಡರಾದ ಎಸ್.ವಿ.ರಂಗನಾಥ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕುಂಚಿಟಿಗರ ಕುಲತಿಲಕ ಧರ್ಮಪ್ರಕಾಶ ರಾವ್ ಬಹದ್ದೂರ್ ಬನುಮಯ್ಯ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಕುಂಚಿಟಿಗರ ಕೇಂದ್ರ ಓಬಿಸಿ ಮೀಸಲಾತಿ ಹಕ್ಕೊತ್ತಾಯ ಮಾಡುವ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.
ಶಿರಾ ಕುಂಚಿಟಿಗರ ಸಂಘದ ಆರ್.ವಿ.ಪುಟ್ಟಕಾಮಣ್ಣ ಮಾತನಾಡಿ,ಕುಂಚಿಟಿಗರಿಗೆ ಕೇಂದ್ರ ಸರ್ಕಾರದ ಓಬಿಸಿ ಮೀಸಲಾತಿ ಕೈ ತಪ್ಪಿ ಹೋಗಿ ಕಳೆದ 27 ವರ್ಷಗಳಿಂದ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಕುಂಚಿಟಿಗ ಸಮುದಾಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂಬುದಾಗಿ ಹೇಳಿದರು.
ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ವಿ.ಕುಬೇರಪ್ಪ ಮಾತನಾಡಿ, ಕುಂಚಿಟಿಗರು ಮಧ್ಯ ಕರ್ನಾಟಕದ ಬಹುತೇಕ ಹಳ್ಳಿಗಾಡಿನ ಕುಗ್ರಾಮಗಳಲ್ಲಿ ನೆಲೆಸಿ ಕೃಷಿ, ಕೂಲಿ, ಪಶುಸಂಗೋಪನೆ, ಹೈನುಗಾರಿಕೆ ಮಾಡಿಕೊಂಡು ಮಳೆಯಾಶ್ರಿತ ವ್ಯವಸಾಯದ ಜೊತೆಗೆ ಬುಡಕಟ್ಟು ಸಂಸ್ಕೃತಿಯ ಆಚರಣೆ ಮಾಡುತ್ತಾರೆ ಎಂದರಲ್ಲದೆ,
ರಾಜ್ಯಾದ್ಯಂತ ಹರಿದುಹಂಚಿ ಹೋಗಿರುವ ಕುಂಚಿಟಿಗರು ಪ್ರಾದೇಶಿಕ ಭಾಷೆಗಳ ವ್ಯತ್ಯಾಸ ಮತ್ತು ಸ್ಥಳೀಯ ಪಟ್ಟಭದ್ರರ ಪ್ರಭಾವಕ್ಕೆ ಮಣಿದು ಕುಂಚಿಟಿಗ ಜಾತಿಯ ಜೊತೆಗೆ ಕುಂಚವಕ್ಕಲ್, ಕಮಾಟಿ, ನಾಮದಾರಿ, ಲಿಂಗಾಯಿತ, ಒಕ್ಕಲಿಗ ಅಂತ ಸೇರಿಸಿಕೊಂಡು ಜಾತಿಪಟ್ಟಿಯಲ್ಲಿ ಅಸ್ತಿತ್ವದಲ್ಲಿಲ್ಲದ ಹೆಸರಿನಲ್ಲಿ ಜಾತಿ ಸಿಂಧುತ್ವ ಸಿಗದೆ ತೊಂದರೆ ಅನುಭವಿಸುವಂತಾಗಿದೆ ಎಂದರು.
ಕುಂಚಿಟಿಗರ ರಾಜ್ಯ ಒಕ್ಕೂಟದ ಅಧ್ಯಕ್ಷ ಕಸವನಹಳ್ಳಿರಮೇಶ್ ಮಾತನಾಡಿ, ಕುಂಚಿಟಿಗರ ಏಕೀಕರಣ ಮತ್ತು ಧೃವೀಕರಣ ಹೋರಾಟದ ಮುಂದುವರಿದ ಭಾಗವಾಗಿ ಇದೀಗ ಕುಲಬೆಡಗುಗಳ ಆಧಾರ ಮತ್ತು “ಮರಳಿ ಬಾ ಕುಂಚಿಟಿಗ” ಜನಾಂದೋಲನ,ಅಂತರ ರಾಜ್ಯ ಕುಂಚಿಟಿಗರ ಭಾವೈಕ್ಯತಾ ಪ್ರವಾಸ, ಕುಲದೈವ ಯಾತ್ರೆ ಕಾರ್ಯಕ್ರಮದಡಿ ಕುಂಚಿಟಿಗರು ಒಂದುಗೂಡುತ್ತಿದ್ದಾರೆ ಎಂದರು.
ಕುಂಚಿಟಿಗರು ಶಾಶ್ವತ ನೀರಾವರಿ ಸೌಕರ್ಯವಿಲ್ಲದೆ,ಮಳೆ ನೆರಳಿನ ಬಯಲು ಸೀಮೆಯಲ್ಲಿ ಬಾರದ ಮಳೆ,ಬತ್ತಿದ ಕೆರೆ,ಏರಿದ ಬಡ್ಡಿ, ತೀರದ ಸಾಲ,ಅತೀವೃಷ್ಟಿ,ಅನಾವೃಷ್ಟಿ,ಬೆಳೆ ನಷ್ಟ,ಬೆಲೆ ಕುಸಿತಗಳಿಂದ ಉತ್ಪಾದನಾ ವೆಚ್ಚ ಕೂಡ ಲಭಿಸದೆ,ಕೃಷಿ ಮತ್ತು ಬೆಳೆ ಸಾಲ ತೀರಿಸಲಾಗದೆ ವ್ಯವಸಾಯಕ್ಕೆ ವಿದಾಯ ಹೇಳಿ ನಗರ ಪ್ರದೇಶಗಳಿಗೆ ವಲಸೆ ಹೋಗಿ ಸಣ್ಣ ಪುಟ್ಟ ಕೆಲಸ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಎಂದರಲ್ಲದೆ,
ಗ್ರಾಮೀಣ ರೈತಾಪಿ ಮಕ್ಕಳು ಕೂಡ ಹಗಲು ರಾತ್ರಿ,ಕಲ್ಲು ಮುಳ್ಳು,ಹಾವು ಚೇಳು ವಿಷ ಜಂತುಗಳ ನಡುವೆ ಜೀವದ ಹಂಗು ತೊರೆದು ವ್ಯವಸಾಯ ಕೆಲಸ ಮಾಡಿಕೊಂಡು, ಸಾರಿಗೆ ಸೌಕರ್ಯವಂಚಿತ ಮೂಲಭೂತ ಸೌಕರ್ಯವಿಲ್ಲದ ಶಾಲೆಗಳಲ್ಲಿ ಅರೆಕಾಲಿಕ ಶಿಕ್ಷಣ ಪಡೆದು ಕೇಂದ್ರ ಸರ್ಕಾರದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಜನರಲ್ ಮೆರಿಟ್ ನಲ್ಲಿ ಸ್ಪರ್ಧೆ ಮಾಡಬೇಕಾಗಿದೆ. ಆದ್ದರಿಂದ ಕುಂಚಿಟಿಗರಿಗೆ ಗ್ರಾಮೀಣ ಮತ್ತು ನಗರ ತಾರತಮ್ಯ ಮಾಡದೆ ಕೇಂದ್ರ ಓ ಬಿ ಸಿ ಮೀಸಲಾತಿ ಕಲ್ಪಿಸಬೇಕು ಎಂದರು.
ಈಗಾಗಲೇ ಕೇಂದ್ರ ಓ ಬಿ ಸಿ ಮೀಸಲಾತಿ ಇಲ್ಲದ ಆರ್ಥಿಕವಾಗಿ ಹಿಂದುಳಿದ ಕುಂಚಿಟಿಗರಿಗೆ ಇಡಬ್ಲೂಎಸ್ ಮೀಸಲಾತಿ ಇತ್ತೀಚೆಗೆ ಸಿಕ್ಕಿದ್ದು, ಈಗ ಒಕ್ಕಲಿಗರಿಗೆ ಅನುಸರಿಸಿದ ಮಾದರಿಯಲ್ಲಿ ಗ್ರಾಮೀಣ ಕುಂಚಿಟಿಗರಿಗೆ ಮಾತ್ರ ಓ ಬಿ ಸಿ ಮೀಸಲಾತಿ ಕಲ್ಪಿಸುವ ಮಾತು ಕೇಳಿ ಬರುತ್ತಿದೆ.ಯಾವುದೇ ಕಾರಣಕ್ಕೂ ಅಂತಹ ತೀರ್ಮಾನ ಮಾಡಬಾರದು ಎಂದು ಹೇಳಿದರು.
ಹಿಂದುಳಿದ ವರ್ಗಗಳ ಪರಮೋಚ್ಚ ಅಹಿಂದ ನಾಯಕರಾದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮತ್ತು ಕುಂಚಿಟಿಗರ ಹಿರಿಯ ಸಂಸದೀಯ ಪಟು ಮುತ್ಸದ್ದಿ ರಾಜಕಾರಣಿ ಟಿಬಿ ಜಯಚಂದ್ರ ರವರು ಯಾವುದೇ ಕಾರಣಕ್ಕೂ ಗ್ರಾಮೀಣ ಮತ್ತು ನಗರ ಕುಂಚಿಟಿಗ ಎಂದು ತಾರತಮ್ಯ ಮಾಡದೆ ಸಮಸ್ಥ ಕುಂಚಿಟಿಗರಿಗೆ ಕೇಂದ್ರ ಸರ್ಕಾರದ ಓಬಿಸಿ ಮೀಸಲಾತಿ ಕಲ್ಪಿಸಲು ಶಿಫಾರಸು ಮಾಡಬೇಕೆಂದು ಮನವಿ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ಈಗಾಗಲೇ ಕುಂಚಿಟಿಗ ಕುಲಶಾಸ್ತ್ರ ಅಧ್ಯಯನ ವರದಿಯನ್ನು ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಅನುಮೋದಿಸಿ ಕೇಂದ್ರಕ್ಕೆ ಕಳುಹಿಸಿದ್ದು,ಕೇಂದ್ರ ಸರ್ಕಾರದಿಂದ ತ್ವರಿತಗತಿಯಲ್ಲಿ ಓ ಬಿ ಸಿ ಮೀಸಲಾತಿ ಕೊಡಿಸಿ ಕೊಡುವಂತೆ ಕೇಂದ್ರ ಸಚಿವ ನಾರಾಯಣಸ್ವಾಮಿ ಯವರಿಗೆ, ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ರಾಷ್ಟ್ರೀಯ ಕುಂಚಿಟಿಗರ ಮಾಹಾಸಭಾದ ಅಧ್ಯಕ್ಷ ಹೆಚ್ ಪಿ ಗುರುನಾಥ್,ಶಿಕಾರಿಪುರ ಕುಂಚಿಟಿಗ ಸಮಾಜದ ಕೆ ಪಿ ರುದ್ರಪ್ಪ,ಚಿತ್ರದುರ್ಗ ಜಿಲ್ಲಾ ಸಂಘದ ಅಧ್ಯಕ್ಷ ಚೇತನ್ ಕರ್ನಾಟಕ ರಾಜ್ಯ ಕುಂಚಿಟಿಗರ ಮಹಿಳಾ ಸಂಘದ ಅಧ್ಯಕ್ಷ ರಾದ ಲಲಿತಮಲ್ಲಪ್ಪ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಹಿರಿಯೂರು ತಾಲ್ಲೂಕು ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹುಲಿರಂಗನಾಥ್, ಜಿಲ್ಲಾ ಸಂಘದ ನಿರ್ದೇಶಕ ಮದಕರಿಪುರ ಕುಮಾರ್, ಕುಬೇರಪ್ಪ, ಜೋಗೇಶ್, ಶಶಿಕಲಾ, ಜಯಪ್ರಕಾಶ, ಚಂದ್ರಗಿರಿ, ಅವಿನಾಶ್, ಡಿ.ಹನುಮಂತರಾಯ, ಲೋಹಿತ್ , ಹುಲಿಯಪ್ಪ, ಗುಬ್ಬಿಜಯಣ್ಣ, ಗಂಗಣ್ಣ, ,ವಿಠ್ಠಲಮೂರ್ತಿ, ಹೆಚ್. ರಾಮಚಂದ್ರಪ್ಪ ಹೆಗ್ಗೆರೆ, ಆನಂದಪ್ಪ, ಇತರರು ಉಪಸ್ಥಿತರಿದ್ದರು.
ಕುಂಚಿಟಿಗರಿಗೆ ತ್ವರಿತವಾಗಿ ಕೇಂದ್ರ ಓಬಿಸಿ ಮೀಸಲಾತಿ ಕಲ್ಪಿಸುವಂತೆ ಎಸ್.ವಿ.ರಂಗನಾಥ್ ರವರಿಂದ ಒತ್ತಾಯ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments