ಹಿರಿಯೂರು :
ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾಯರು 1905ರಲ್ಲಿ ಕರ್ನಾಟಕ ಏಕೀಕರಣ ಚಳುವಳಿಯನ್ನು ಪ್ರಾರಂಭಿಸಿದರು, ಭಾರತವು ಸ್ವಾತಂತ್ರ್ಯ ನಂತರ ದಕ್ಷಿಣ ಭಾರತದಲ್ಲಿ ವಿವಿಧ ಪ್ರಾಂತಗಳು ವಿವಿಧ ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರಚನೆಗೊಂಡವು, ಈ ಸಂದರ್ಭದಲ್ಲಿ ಕನ್ನಡ ಭಾಷೆಯನ್ನು ಮಾತನಾಡುವ ಪ್ರದೇಶಗಳು ಸೇರಿ ಮೊದಲಿಗೆ ಮೈಸೂರು ರಾಜ್ಯದ ಉದಯವಾಯಿತು, ಈ ದಿನವನ್ನು ಕನ್ನಡ ರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂಬುದಾಗಿ ತಾಲ್ಲೂಕು ತಹಶೀಲ್ದಾರರಾದ ರಾಜೇಶ್ ಕುಮಾರ್ ಹೇಳಿದರು.
ನಗರದ ನೆಹರು ಮೈದಾನದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ನಗರಸಭೆ, ಹಾಗೂ ರಾಷ್ಟ್ರೀಯಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ 68ನೇ ವರ್ಷದ ಕನ್ನಡರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು.
ಈ ಮೈಸೂರು ರಾಜ್ಯವನ್ನು ಅಂದಿನ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಶ್ರೀ ದೇವರಾಜ ಅರಸು ರವರ ಕಾಲದಲ್ಲಿ 1973 ರ ನವಂಬರ್ 1 ರಂದು “ಕರ್ನಾಟಕ” ರಾಜ್ಯವೆಂದು ಮರುನಾಮಕರಣ ಮಾಡಲಾಯಿತು, ಅಂದಿನ ದಿನಗಳಲ್ಲಿ ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದ ಕೀರ್ತಿ ಸಾಹಿತಿಗಳಾದ ಕುವೆಂಪು, ಕೆ.ಶಿವರಾಂಕಾರಂತ್, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಅ.ನ.ಕೃ, ಬಿ.ಎಂ.ಶ್ರೀಕಂಠಯ್ಯ ಸೇರಿದಂತೆ ಹಲವಾರು ಮಹಾನ್ ವ್ಯಕ್ತಿಗಳಿಗೆ ಸಲ್ಲುತ್ತದೆ.
ದೇಶ ರಾಜ್ಯ ಒಂದಕ್ಕೆ ಅದರದೇ ಆದ ಸ್ವಾತಂತ್ರ್ಯದ ಸಂಕೇತವಾಗಿ ಒಂದು ಧ್ವಜವನ್ನು ನೀಡಬೇಕಾಗಿರುತ್ತದೆ, ಇದನ್ನು ಮನಗಂಡು ಕನ್ನಡ ಹೋರಾಟಗಾರರಾದ ಶ್ರೀ ಎಂ.ರಾಮಮೂರ್ತಿಗಳು ಹಳದಿ ಮತ್ತು ಕೆಂಪು ಬಣ್ಣವನ್ನು ಬಳಸಿ ಬಾವುಟವನ್ನು ಸಿದ್ಧಪಡಿಸಿದ್ದರು. ಹಳದಿ ಬಣ್ಣವು ಶಾಂತಿ ಸೌಹಾರ್ದತೆಯನ್ನು ಸೂಚಿಸಿದರೆ ಕೆಂಪು ಬಣ್ಣ ಕ್ರಾಂತಿಯ ಸೂಚಕವಾಗಿದ್ದು, ಈ ಧ್ವಜವು ಕನ್ನಡಿಗರು ಶಾಂತಿಗೂ ಬದ್ಧ ಯುದ್ಧಕ್ಕೂ ಸಿದ್ಧ ಎಂಬ ಸಂದೇಶವನ್ನು ನೀಡುತ್ತದೆ ಎಂದರು.
ಕರ್ನಾಟಕ ರಾಜ್ಯವು ಕಲೆ, ಸಾಹಿತ್ಯ, ನಾಟಕರಂಗ ಸಂಸ್ಕೃತಿಯಲ್ಲಿ ಸಂಪತ್ಪಭರಿತ ರಾಜ್ಯವಾಗಿದ್ದು, ಕನ್ನಡ ನಾಡು ನುಡಿ ಸಾಹಿತ್ಯಕ್ಕಾಗಿ ದುಡಿದ ಮಹಾನ್ ವ್ಯಕ್ತಿಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ನಮ್ಮ ರಾಜ್ಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯೋತ್ಸವದ ದಿನದಂದು ಕನ್ನಡ ನಾಡು ನುಡಿ ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಸಾಧನೆ ಮಾಡಿದಂತಹ ಸಾಧಕರು ಸನ್ಮಾನಿಸಿ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಗುತ್ತಿದೆ ಎಂಬುದಾಗಿ ಹೇಳಿದರು.
ರಾಜ್ಯ ಸರ್ಕಾರವು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಸಾರ್ವಜನಿಕರಲ್ಲಿ ಬೆಳೆಸಲು ಮುಂದಾಗಿರುತ್ತದೆ ಕನ್ನಡ ನಾಡಿನ ಭಾಷೆ ನೆಲ ಜಲ ಹಾಗೂ ಕನ್ನಡ ಭಾಷೆಯ ವೃತ್ತಿಗೆ ಮತ್ತು ಹಲವಾರು ಯೋಜನೆಗಳನ್ನು ರೂಪಿಸಿದ ಕಲಾವಿದರಿಗೆ ಸಂಭಾವನೆ ಪಿಂಚಣಿ ನೀಡಿ ಗೌರವಿಸಲಾಗುತ್ತಿದೆ ಕನ್ನಡ ನಾಡು ನುಡಿ ಮತ್ತು ಸಂಸ್ಕೃತಿ ರಕ್ಷಣೆಗೆ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತಿದೆ ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರುಗಳಾದ ಪಿ.ಆರ್.ಸತೀಶ್ ಬಾಬು ಪತ್ರಿಕಾ ಕ್ಷೇತ್ರ, ಸಾವಿತ್ರಮ್ಮ ಕೋಂ.ವೀರಣ್ಣ ಜಾನಪದ ಕ್ಷೇತ್ರ, ನಾಗರಾಜ್ ಚಿಲ್ಲಹಳ್ಳಿ ಭಜನಾ ಕ್ಷೇತ್ರ, ಕನ್ನಡಪರ ಹೋರಾಟಗಾರರಾದ ಕರವೇ ಅಧ್ಯಕ್ಷ ರಾಮಕೃಷ್ಣ, ಶಿಲ್ಪ ಜಗದೀಶ್ ಸಾಹಿತ್ಯ ಕ್ಷೇತ್ರ, ಹೆಚ್.ಎಸ್.ಮಾರುತೇಶ್ ರಂಗಭೂಮಿ ಕಲಾವಿದರು, ಹೆಚ್.ಎಸ್.ರವಿಶಂಕರ್ ಸಂಗೀತ ಕ್ಷೇತ್ರ, ಮುದ್ದುರಾಜ್ ಹುಲಿತೊಟ್ಲು ಬರಹಗಾರರು, ವೈ.ಕೃಷ್ಣಪ್ಪ ಕೊಟ್ಟಿಗೆ ಸಮಾಜಸೇವೆ, ಡಾ.ವೀರಣ್ಣ ಪ್ರಜಾವಾಣಿ ವರದಿಗಾರರು ಧರ್ಮಪುರ, ಇವರುಗಳನ್ನು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ, ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷರಾದ ವಿ.ಎಂ.ನಾಗೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಆರ್.ಶಿವಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ, ನಗರಸಭೆ ಪ್ರಭಾರಿ ಪೌರಾಯುಕ್ತರಾದ ರಾಜು, ಬಿ.ಆರ್.ಸಿ ತಿಪ್ಪೇರುದ್ರಪ್ಪ, ಶಿಕ್ಷಣ ಸಂಯೋಜಕರುಗಳಾದ ಶಶಿಧರ್, ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಮನೋಹರ್, ಸರ್ಕಲ್ ಇನ್ಸ್ ಪೆಕ್ಟರ್ ಗಳಾದ ರಾಘವೇಂದ್ರ, ನಗರಸಭೆ ಸದಸ್ಯರುಗಳಾದ ಶಿವರಂಜಿನಿ ಯಾದವ್, ಅಂಬಿಕಾ ಆರಾಧ್ಯ, ವಿಶಾಲಾಕ್ಷಮ್ಮ, ಮೊದಲಮೇರಿ, ಪ್ರಕಾಶ್, ಈರಲಿಂಗೇಗೌಡ, ಚಿತ್ರಜಿತ್ ಯಾದವ್, ಶಿವಕುಮಾರ್, ಕರವೇ ಅಧ್ಯಮಕ್ಷ ರಾಮಕೃಷ್ಣ, ಕಾರ್ಯದರ್ಶಿ ದಾದಾಪೀರ್, ಗೌ.ಅಧ್ಯಕ್ಷ ಗೋ.ಬಸವರಾಜ್, ವಿವಿಧ ಕನ್ನಡಪರ ಸಂಘಟನೆಗಳ ಮುಖ್ಯಸ್ಥರಾದ ಬಸವರಾಜ್, ಮಹೇಶ್, ಸೇರಿದಂತೆ ತಾಲ್ಲೂಕಿನ ವಿವಿಧ ಇಲಾಖೆಗಳ ಮುಖ್ಯಸ್ಥರು, ನೌಕರರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
0 Comments