ಕಥೆ-ಕವನ

ಸಾಹಿತ್ಯ ಸಂಸ್ಕಾರ ಸಮಾಜದ ಬದುಕನ್ನು ಅರ್ಥೈಸಿಕೊಳ್ಳುವ ಮಹಾಶಕ್ತಿಯಾಗಿದೆ ಎಂದು ಹಿರಿಯ ಕತೆಗಾರ ತಿಪ್ಪಣ್ಣ ಮರಿಕುಂಟೆ ಹೇಳಿದರು.

ಚಳ್ಳಕೆರೆ ನವಂಬರ್12.
ಸಾಹಿತ್ಯ ಸಂಸ್ಕಾರ ಸಮಾಜದ ಬದುಕನ್ನು ಅರ್ಥೈಸಿಕೊಳ್ಳುವ ಮಹಾಶಕ್ತಿಯಾಗಿದೆ ಎಂದು ಹಿರಿಯ ಕತೆಗಾರ ತಿಪ್ಪಣ್ಣ ಮರಿಕುಂಟೆ ಹೇಳಿದರು.
ತಾಲೂಕಿನ ದೇವರಮರಿಕುಂಟೆ ಗ್ರಾಮದಲ್ಲಿ ಶನಿವಾರ ಗ್ರಾಮೀಣ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ನೆನಪು ಮಾಸಿಕ ಕಾರ್ಯಕ್ರಮ ಮತ್ತು ಕವಿ ಕರ‍್ಲಕುಂಟೆ ತಿಪ್ಪೇಸ್ವಾಮಿ ಅವರ ಭಾವರೂಪ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಸಾಹಿತ್ಯ ಸಾಂಸ್ಕೃತಿಕ ನೆಲೆಗಟ್ಟಿನ ಪರಂಪರೆ ಇದೆ. ಬದುಕಿನೊಟ್ಟಿಗೆ ಇದನ್ನು ಉಳಿಸಿಕೊಳ್ಳುವ ಇಚ್ಚಾಸಕ್ತಿ ಜನಮಾಸದಲ್ಲಿ ಕಾಪಾಡಿಕೊಳ್ಳಬೇಕಿದೆ. ಬೆಳಗೆರೆ ಕೃಷ್ಣಶಾಸ್ತಿçಗಳು ಜಿ.ಎಸ್. ಶಿವರುದ್ರಪ್ಪ, ಆರಾಸೇ ಮಹನೀಯರು ಸೂಚಿತ ಗ್ರಾಮೀಣ ಸಾಹಿತ್ಯ ಪರಿಷತ್ತು ಹೆಸರಿನಡಿ ಸುಮಾರು 32 ವರ್ಷಗಳ ಕಾಲ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಇದರಿಂದ ಗ್ರಾಮೀಣ ಜನಜೀವನದ ಸೊಗಡು, ಜೀವನ ಶೈಲಿ ಮತ್ತು ಜನಪದರ ನೋವು-ದುಮ್ಮಾನವನ್ನು ಸಮಾಜಕ್ಕೆ ಪರಿಚಯಿಸುವ ಕೆಲಸವಾಗಿದೆ. ಪ್ರತಿಭಾವಂತ ಬರಹಗಾರರಿಗೆ ವೇದ, ಋಗ್ವೇದ, ರಾಮಾಯಣ, ಮಹಾಭಾರತ ಅಧ್ಯಯನ ಮಾಡಿಕೊಳ್ಳಲು ಪುಸ್ತಕಗಳ ಸಂಗ್ರಹ ಮಾಡಲಾಗಿದೆ. ಇದನ್ನು ಸದುಪಯೋಗ ಮಾಡಿಕೊಳ್ಳುವ ಮನಸ್ಸುಗಳ ಸಂಖ್ಯೆ ಬೆಳೆಯಬೇಕಿದೆ ಎಂದ ಅವರು, ಕರ‍್ಲಕುಂಟೆ ತಿಪ್ಪೇಸ್ವಾಮಿ ಅವರ ಕೆಲ ಕವಿತೆಗಳು ವಿದ್ಯಾರ್ಥಿಗಳಿಗೆ ಪಠ್ಯ ವಿಷಯವಾಗುವ ಅರ್ಹತೆ ಇವೆ ಎಂದು ಭವಿಷ್ಯ ನುಡಿದರು.
‘ಭಾವರೂಪ’ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಬಿಇಒ ಕೆ.ಎಸ್. ಸುರೇಶ್, ಪ್ರಸ್ತುತ ವೈರಾಗ್ಯ ಸಮಾಜದಲ್ಲಿ ಆಡಂಬರ ಮತ್ತು ರಾಜಕೀಯ ಬಯಸುವ ಸಂಖ್ಯೆ ಕಾಣುತ್ತಿದ್ದೇವೆ. ಸಮಾಜವನ್ನು ಅರ್ಥೈಸುವ ಸಾಹಿತ್ಯ ಕೇಳುವ ಮತ್ತು ಪ್ರೋತ್ಸಾಹಿಸುವ ಇಚ್ಚಾಸಕ್ತಿ ಕಾಣುತ್ತಿಲ್ಲ. ನಗರ ಶೈಲಿಗೆ ಮಾರು ಹೋಗುತ್ತಿರುವು ಹಳ್ಳಿಗಳಲ್ಲೂ ಜೀವನದ ಸೊಗಡು, ಸಂಸ್ಕೃತಿ ಉಳಿದುಕೊಳ್ಳುತ್ತಿಲ್ಲ. ಇದರಿಂದ ಜೀವನದ ಸಾರ್ಥಕತೆ ಕಂಡುಕೊಳ್ಳಲಾಗದೆ, ಬೆಚ್ಚಿ ಬೀಳಿಸುವ ಘಟನೆಗಳ ಹಿಂದೆ ಹೋಗುತ್ತಿದ್ದೇವೆ. ಸಾಹಿತ್ಯ ರಚನೆಕಾರರು ಹಳ್ಳಿಯಾಗಲೀ, ದೇಶದ ಯಾವುದೇ ಭಾಗದಲ್ಲಿರಲಿ ಭಾವನೆ ಒಂದೇ ಇರುತ್ತದೆ. ಆದ್ದರಿಂದ ಸಾಹಿತ್ಯ ಜನಜೀವನದ ಅಂತಃಸತ್ವವಾಗಿರುತ್ತದೆ. ಸುಮಾರು ವರ್ಷಗಳಿಂದ ಸಾಹಿತ್ಯ ಅಭಿರುಚಿಯಲ್ಲಿರುವ ಕರ‍್ಲಕುಂಟೆ ತಿಪ್ಪೇಸ್ವಾಮಿ ಅವರ ಸಾಹಿತ್ಯ ರಚನೆ ಸಮಾಜಮುಖಿಯಾಗಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಎನ್. ರಘುಮೂರ್ತಿ ಮಾತನಾಡಿ, ಸಾಹಿತ್ಯಕ್ಕೆ ಸಮಾಜವನ್ನು ಬೆಸೆಯುವ ಶಕ್ತಿ ಇದೆ. ಗ್ರಾಮೀಣ ಭಾಗದಲ್ಲಿ ನಿರಂತರ ಸಾಹಿತ್ಯ ಸೇವೆಯಲ್ಲಿ ತೊಡಗಿರುವ ತಿಪ್ಪಣ್ಣ ಮರಿಕುಂಟೆ ಅವರ ಸಾಹಿತ್ಯ ಬದುಕು ಸಮಾಜಕ್ಕೆ ಮಾದರಿಯಾಗಿದೆ. ಗಾಮದಲ್ಲಿ ಸುಸಜ್ಜಿತ ಡಿಜಿಟಲ್ ಗ್ರಂಥಾಲಯ ಸ್ಥಾಪನೆ ಮತ್ತು ಒಂದು ಸಾಹಿತ್ಯ ಕಾರ್ಯಕ್ರಮ ಆಯೋಜನೆ ಮಾಡುವ ಇಚ್ಚಾಸಕ್ತಿ ಇದೆ. ಸಾಹಿತ್ಯ ಕಾರ್ಯವನ್ನು ಪ್ರೋತ್ಸಾಹಿಸಿದಾಗ ಮಾತ್ರ ಸಮೃದ್ದ ಭಾಷಾಭಿಮಾನವನ್ನು ಕಟ್ಟಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಕೆ.ಎಸ್. ರಾಘವೇಂದ್ರ ಉದ್ಘಾಟಿಸಿದರು.
ಕವಿ ಕರ‍್ಲಕುಂಟೆ ತಿಪ್ಪೇಸ್ವಾಮಿ, ವೀರಭದ್ರಪ್ಪ, ದೊಡ್ಡಯ್ಯ, ಪೂಜಾರಿ ಗೋವಿಂದಪ್ಪ, ಮಂಜುನಾಥ, ರಾಜಶೇಖರ, ಬಿ ಒ ಕೆ.ಎಸ್ ಸುರೇಶ್ ಮತ್ತಿತರರು ಇದ್ದರು.

ಗ್ರಹಣ ಹಾಗೂ ನ್ಯೂಸ್ ಚಾನೆಲ್ ಗಳ ಸುತ್ತ

***************************************
ಈ ಸೂರ್ಯಗ್ರಹಣ , ಚಂದ್ರಗ್ರಹಣ ಅಂತ ಬಂದರೆ ಸಾಕು, ಸೂರ್ಯ ಚಂದ್ರಗಿಂತಲೂ ಸಿಕ್ಕಾಪಟ್ಟೆ ಬಿಜ಼ಿ ಆಗೋದು ಅಂದ್ರೆ ನಮ್ಮ‌ ಟೀವಿ ನ್ಯೂಸ್ ಚಾನೆಲ್ ಗಳು ! ನಭೋಮಂಡಲದಲ್ಲಿ ಆಯಾ ಕಾಲಕ್ಕನುಸಾರವಾಗಿ ಘಟಿಸುವ ಈ ಕೌತುಕ ವಿದ್ಯಮಾನಗಳು ತಮ್ಮಷ್ಟಕ್ಕೆ ತಾವು ನಡೆದುಕೊಂಡು ಹೋದರೂ ನಮ್ಮ ನ್ಯೂಸ್ ಚಾನೆಲ್ ಗಳು ಸುಮ್ಮನಿರಬೇಕಲ್ಲ ? ಇವರ ಕೃಪೆಯಿಂದ ಗ್ರಹಣಗಳಿಗೆ ಕಲರ್ ಫ಼ುಪ್ ವರ್ಣನೆ ಕೊಟ್ಟು ಭೂಮಂಡಲದ ಎಲ್ಲಾ ಜ್ಯೋತಿಷಿಗಳನ್ನು, ಪಂಡಿತರನ್ನೂ‌ ಸ್ಟುಡಿಯೋದಲ್ಲಿ‌ ಗುಡ್ಡೆ ಹಾಕಿ ಅವರಿಂದ ಪುಂಖಾನುಪುಂಖವಾಗಿ ಗ್ರಹಣದ ಪ್ರಭಾವದಿಂದಾಗಿ ಮನುಜರ ಮೇಲೆ ಆಗಬಹುದಾದ ವಿವಿಧ ಪರಿಣಾಮಗಳನ್ನು ಕುತೂಹಲ ಮತ್ತು ಭಯ ಎರಡನ್ನೂ ಹುಟ್ಟಿಸಿ ತಿಳಿಸುತ್ತಾ , ವೀಕ್ಷಕ ರಾಶಿಯವರ ಮೆದುಳಿಗೇ ಕೈ ಹಾಕಿ ಚಂದ್ರ ಗ್ರಹಣ ಬಿಟ್ಟರೂ ಟೀವಿ ಗ್ರಹಣ‌ ಬಿಡದಂತೆ ಕಾಪಾಡಿಕೊಂಡು ಬರುತ್ತಾರೆ.

ಇದು ಪ್ರತೀ ಗ್ರಹಣದ ದಿನ‌ ನಡೆಯುವ ಟೀವಿ ವಿದ್ಯಮಾನ.

ಗ್ರಹಣಕ್ಕೆ ಸಂಬಂಧಿಸಿದಂತೆ ಪಾಲಿಸಬೇಕಾದ ಆಚಾರ ವಿಚಾರಗಳು ಹಾಗೂ ನಂಬಿಕೆಗಳ ಕುರಿತಾಗಿ ಹೆಚ್ಚು ಮಾತನಾಡದಿರೋದೇ ಬೆಟರ್ . ಏಕೆಂದರೆ ಪ್ರತಿಯೊಬ್ಬರೂ ಈ ದಿನ ಹೇಗಿರಬೇಕು , ಏನು ಮಾಡಬೇಕು- ಮಾಡಬಾರದು, ಏನು ತಿನ್ನಬೇಕು- ತಿನ್ನಬಾರದು, ಎಲ್ಲಿಗೆ ಹೋಗಬೇಕು- ಹೋಗಬಾರದು ಎಂಬ ಬಗ್ಗೆ ಈಗಾಗಲೇ ಮೈಂಡ್ ಫ಼ಿಕ್ಸ್ ಮಾಡಿಕೊಂಡಿರೋದ್ರಿಂದ ಯಾರನ್ನು ಯಾರೂ ಬದಲಾಯಿಸೋಕೆ ಆಗೋಲ್ಲ- ಹೋಗೋಲ್ಲ.

ಆದರೆ ನನ್ನಲ್ಲಿ ತೀರಾ ರೇಜಿಗೆ ಹುಟ್ಟಿಸುವ ಸಂಗತಿಯೆಂದರೆ ನಮ್ಮ ಟೀವಿ ನ್ಯೂಸ್ ಚಾನೆಲ್ ಗಳು ಜನರಲ್ಲಿ ಗ್ರಹಣದ ಬಗೆಗೆ ಹುಟ್ಟಿಸುತ್ತಿರುವ ವಿಪರೀತ ಕುತೂಹಲ ಹಾಗೂ ಸಾಮಾಜಿಕ ಭಯವನ್ನು ಕುರಿತದ್ದು ! ಇವರ ಅಡ್ವೈಸ್ ನ ಅಬ್ಬರ ಯಾವ ರೀತಿಯಲ್ಲಿ ಪರಿಣಾಮಕಾರಿ ಯಾಗಿರುತ್ತದೆಯೆಂದರೆ ಶುಗರ್ ಇರೋರೂ ಸಹ ಗ್ರಹಣ‌ ಬಿಡೋವರೆಗೂ ಏನೂ ತಿನ್ನೋಲ್ಲ, ಮೈ ಕೈ ನವೆಯಾದ್ರೂ ಸ್ನಾನ ಮಾಡೋ ಹಂಗಿಲ್ಲ, ಅನಿವಾರ್ಯವಿದ್ದರೂ ಎಲ್ಲಿಗೂ ಹೋಗೋ ಹಂಗಿಲ್ಲ, ಹೊರಗಡೆ ಎಲ್ಲೂ ಸುತ್ತೋ ಹಂಗಿಲ್ಲ, ರಸ್ತೆಗಳು, ಕಚೇರಿಗಳು, ಷಾಪ್ ಗಳು, ದೇವಾಲಯಗಳು ಎಲ್ಲವೂ ತಾವೇ ತಾವಾಗಿ ಬಂದ್ ಆಗಿಬಿಡುತ್ತವೆ. ಆಫ಼ೀಸುಗಳಲ್ಲಿ ಯಾವ ಕೆಲಸವೂ‌ ಗ್ರಹಣದ ಕಾರಣದಿಂದ ಆಗುವ ಛಾನ್ಸೇ ಇಲ್ಲ. ಒಟ್ಟಾರೆ ಕೊರೋನಾ ಟೈಮಲ್ಲಿ ಹೊರಗೆ ಬರಬೇಡಿ ಎಂದು‌ ಬಡ್ಕೊಂಡ್ರೂ ಹೊರಗೆ ಸುತ್ತಾಡುವ ನಮ್ಮ ಜನ, ಗ್ರಹಣ ಅಂದ್ರೆ ಸಾಕು, ಬಾಗಿಲು ಬಂದ್‌ ಮಾಡ್ಕೊಂಡು ಮೌಢ್ಯಕ್ಕೆ ಶರಣಾಗಿ ಬಿಡ್ತಾರೆ ಹಾಗೂ ಇದಕ್ಕೆ ನಮ್ಮ ಚಾನೆಲ್ ಗಳ ಕೊಡುಗೆ ಅಪಾರ.

ಓಕೆ, ಇವಿಷ್ಟೇ ಆಗಿದ್ದಲ್ಲಿ ತೊಂದರೆಯಿರಲಿಲ್ಲ. ಆದರೆ ಗ್ರಹಣದ ಆಚರಣೆಯ‌ ವಿಧಾನದಲ್ಲಿ ಇಲ್ಲ- ಸಲ್ಲದ‌ ಸಲಹೆಗಳನ್ನು‌ ಕೊಟ್ಟು ಅವರಲ್ಲಿ‌ ಭಯ‌ಹುಟ್ಟಿಸುವ ಕೆಲ ಟೀವಿ ಚಾನೆಲ್ ರವರ ‌ಕಾರ್ಯ ಅತ್ಯಂತ ಅಸಹನೀಯವೆನಿಸಿಬಿಡುತ್ತದೆ .

ಉದಾಹರಣೆಗೆ ಬೆಳಿಗ್ಗೆ ಒಂದು ನ್ಯೂಸ್ ಚಾನೆಲ್‌ನಲ್ಲಿ‌ ಒಬ್ಬಾತ ಹೇಳುತ್ತಾರೆ ” ಈ‌ ಚಂದ್ರ ಗ್ರಹಣದಂದು ಗರ್ಭಿಣಿಯರಿಗೆ ನೀರಿನ‌ ಗಂಡಾಂತರ ಇರೋದ್ರಿಂದ, ಗ್ರಹಣ‌ ಬಿಡೋವರೆಗೂ ಅವರು ನೀರಿಂದ‌ ದೂರ ಇರಬೇಕು ಎಂದು ! ಹೀಗೆ ಹೇಳುವವರ ತಲೆಯಲ್ಲಿ ಏನಿದೆಯೋ, ಅರಿಯಲು ನನಗೆ ಅಷ್ಟು ಜ್ಞಾನ ಇಲ್ಲ.‌ ಆದರೆ‌ ಹೀಗೆಲ್ಲಾ ಅವರಿಗೆ ಭಯಪಡಿಸಿದಲ್ಲಿ ಗರ್ಭಿಣಿಯರ ಮಾನಸಿಕ ಸ್ಥಿತಿ ಹೇಗಿರಬಲ್ಲದು ಎಂಬ ಕಾಮನ್‌ಸೆನ್ಸ್‌ ಬಗ್ಗೆ ಹೀಗೆಲ್ಲಾ ಕಣಿ ಹೇಳುವವರು ಯೋಚಿಸಲು ಹೋಗೋಲ್ಲ. ಗರ್ಭ ಧರಿಸಿರುವ ಹಂತದಲ್ಲಿ ಮಹಿಳೆಯರಿಗೆ ಮುಖ್ಯವಾಗಿ ಬೇಕಾಗಿರುವುದು ಸಮಯಕ್ಕೆ ತಕ್ಕ ಪೌಷ್ಟಿಕ ಆಹಾರ, ಮನೋಸ್ಥೈರ್ಯ, ಆತ್ಮವಿಶ್ವಾಸ, ಒಳ್ಳೆಯ ವಾತಾವರಣ ಹಾಗೂ ನಿರಂತರ ಆರೈಕೆ. ಯಾವುದೇ ಕಾರಣಕ್ಕೂ ಅವರಲ್ಲಿ ಆತಂಕ, ಖಿನ್ನತೆ ಅಥವಾ ಗಾಬರಿ ಹುಟ್ಟಿಸುವ ಸಂಗತಿಗಳು ಈ ಹಂತದಲ್ಲಿ ಸುಳಿಯಬಾರದು. ಇದು‌ ನಮ್ಮಂತಹಾ ಆರ್ಡಿನರಿಗಳಿಗೆ ತಿಳಿದಿರೋದು. ಆದರೆ‌ ಗ್ರಹಣದ ಹೆಸರಲ್ಲಿ ಈ ಗಿರಾಕಿಗಳು ಏನೆಲ್ಲಾ ಕಥೆ ಕವನಗಳನ್ನು ಹೆಣೆದು ಜನರಲ್ಲಿ ಅನಗತ್ಯ ಭಯ ಬಿತ್ತುವುದನ್ನು ಕಂಡರೆ ಆ ಚಂದ್ರನೂ ನಾಚಿ ನೀರಾದಾನು !

ಇಂತಹಾ ಸಂಧರ್ಭದಲ್ಲಿ ನಮ್ಮ ಟೀವಿ ಚಾನೆಲ್‌ಗಳು ಹೆಚ್ಚಿನ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಕೆಲಸ ಮಾಡೋದು ಒಳ್ಳೆಯದು. ಈ‌ ಮೊದಲೂ ಸಾವಿರಾರು ವರ್ಷಗಳಿಂದ ಗ್ರಹಣ‌ ಸಂಭವಿಸುತ್ತಲೇ ಇತ್ತು. ಆಗೆಲ್ಲಾ ವಿದ್ಯಾವಂತರ ಸಂಖ್ಯೆ ಕಡಿಮೆಯೂ ಇತ್ತು. ಆದರೆ ಇಂದು ಗ್ರಹಣವನ್ನು ನೋಡುವ ರೀತಿಗೂ ಅಂದು ಅದನ್ನು ಸ್ವೀಕರಿಸುತ್ತಿದ್ದ ರೀತಿಗೂ ವ್ಯತ್ಯಾಸವಿದೆ. ತಂತ್ರಜ್ಞಾನ ಬೆಳೆದಂತೆಲ್ಲಾ ಸಾಮಾನ್ಯ ಜ್ಞಾನದ ಹರಿವೂ ಹೆಚ್ಚಬೇಕು. ಆದರೆ ಇಂದಿನ ನೆಟ್ ಜ಼ಮಾನಾದಲ್ಲೂ ಜನರಲ್ಲಿ ಇಲ್ಲ ಸಲ್ಲದ ಭಯವನ್ನು ಹುಟ್ಟಿಸಿ , ಗ್ರಹಣದ ದಿನ ಇಂತಹಾ ರಾಶಿಯವರಿಗೆ ಗಂಡಾಂತರ ಕಾದಿದೆಯೆನ್ನುವುದು, ಅದಕ್ಕೆ ಹೀಗೀಗೆ ಪರಿಹಾರ ಮಾಡಬೇಕೆನ್ನುವ ಸಲಹೆಗಳನ್ನು ಟೀವಿ ಜ್ಯೋತಿಷ್ಯಿಗಳಿಂದ ಹೇಳಿಸುವ ಬಗ್ಗೆ ಒಮ್ಮೆ ರಿವ್ಯೂ ಮಾಡಿಕೊಳ್ಳುವುದು ಒಳ್ಳೆಯದು. ಕೆಲವರಿಗೆ ಅವನ್ನೆಲ್ಲಾ ಪಾಲಿಸುವ ಅನುಕೂಲವೂ ಇಲ್ಲದಿರಬಹುದು !

ಗ್ರಹಣದ ದಿನದಂದು ಅವರವರ ಆಚಾರ , ಆಚರಣೆ, ಜ್ಯೋತಿಷ್ಯ, ನಂಬಿಕೆ ಎಲ್ಲವೂ ಇದ್ದುಕೊಳ್ಳಲಿ . ಆದರೆ‌ ಗ್ರಹಣದ ಹೆಸರಲ್ಲಿ ಅಮಾಯಕ ಜನರಲ್ಲಿ ಇಲ್ಲ ಸಲ್ಲದ ಕಥೆ ಹೇಳಿ ಮೌಢ್ಯವನ್ನು‌ ಬಿತ್ತುವ ಹುಸಿ ಬಾಂಬ್ ಗಳ ಬಗೆಗಷ್ಟೇ ನನ್ನ ಆತಂಕ ಹಾಗೂ ‌ವಿರೋಧ.

** ಮರೆಯುವ ಮುನ್ನ **

ಒಬ್ಬರ ನಂಬಿಕೆಗಳಿಗೆ ಹಾಗೂ ಭಾವನೆಗಳಿಗೆ ಧಕ್ಕೆ ತರುವುದು ಹೇಗೆ ಸಹ್ಯವಲ್ಲವೋ ಹಾಗೆಯೇ ಅಮಾಯಕರಲ್ಲಿ ಮೌಢ್ಯತೆಯನ್ನು ತುಂಬುವ ಅನವಶ್ಯಕ ಚರ್ಚೆಗಳೂ ಅಷ್ಟೇ ಅಪಾಯಕಾರಿ. ಎಲ್ಲಾ ಟೀವಿ ವಾಹಿನಿಯವರೂ ಕೇವಲ ಜ್ಯೋತಿಷಿಗಳನ್ನು ಕರೆಸಿ ಅವರಿಂದ ಗ್ರಹಣದ ದಿನ ಏನು ಮಾಡಬೇಕು, ಏನು ಮಾಡಬಾರದು, ಯಾವ ರಾಶಿಯವರ‌ ಗ್ರಹಗತಿ ಹೇಗೆ ಎಂಬುದರ ಬಗೆಗಿನ ಚರ್ಚೆಗಳನ್ನು ಬೆಳಗಿನಿಂದ ಸಂಜೆಯವರೆಗೆ ಮಾಡಿಸುತ್ತಾರೆಯೇ ವಿನಃ, ಗ್ರಹಣದ ವೈಜ್ಞಾನಿಕ ಕಾರಣ, ಅವುಗಳ ಪರಿಣಾಮ, ಇತ್ಯಾದಿಗಳ ಬಗೆಗೆ ಒಬ್ಬ ಖಗೋಳ ಶಾಸ್ತ್ರಜ್ಞನನ್ನು ಕರೆಸಿ ಜನರಲ್ಲಿ ಅರಿವು ಮೂಡಿಸುವ ಸತ್ಕಾರ್ಯ ಮಾಡಲು ಹೆಜ್ಜೆ‌ ಇಡುವುದಿಲ್ಲ. ಟಿ.ಆರ್.ಪಿ. ಹಿಂದೆ‌ ಬಿದ್ದಿರುವ ಮಹಾನುಭಾವರಿಂದ ಇವೆಲ್ಲಾ ನಿರೀಕ್ಷೆ ಮಾಡುವುದೂ ಸಹಾ ತಪ್ಪಾಗುತ್ತದೆ.

ಅದೇನೇ‌ ಇರಲಿ, ‌ಅಪರೂಪಕ್ಕೊಮ್ಮೆ ನಭೋಮಂಡಲದಲ್ಲಿ ಘಟಿಸುವ, ಯಾರಿಗೂ ಕೆಡುಕನ್ನು ಮಾಡದ ಕೌತುಕದ ಈ ವಿದ್ಯಮಾನವನ್ನು ಖಗೋಳ ಶಾಸ್ತ್ರಜ್ಞರ ಸಲಹೆಗಳಿಗನುಗುಣವಾಗಿ ಕಣ್ತುಂಬಿಕೊಂಡು ಆಸ್ವಾದಿಸಿ, ಅನುಭವಿಸಬೇಕೇ ಹೊರತು ಅದು ನಮ್ಮ‌ ಬದುಕಿನ ದಿಕ್ಕನ್ನು ಅಥವಾ ‌ಭವಿಷ್ಯದ ರೂಪುರೇಷೆಗಳನ್ನು ಬದಲಿಸಬಲ್ಲದು ಎಂಬ ಭಯ ಅಥವಾ ಭ್ರಮೆಯಲ್ಲಿ‌ ಬದುಕುವುದು ಬೇಡ.

ಪ್ರೀತಿಯಿಂದ….

ಹಿರಿಯೂರು ಪ್ರಕಾಶ್.

ಕೆಳಗೆ ಬಿದ್ದರೂ ಮೀಸೆ ಮಣ್ಣಾಗದ ಜಟ್ಟಿಗಳು..

ಕೆಳಗೆ ಬಿದ್ದರೂ ಮೀಸೆ ಮಣ್ಣಾಗದ ಜಟ್ಟಿಗಳು..
***************************************
ನಮ್ಮ ನಡುವೆ ಒಂದಷ್ಟು ಮಂದಿ ಸೆಲೆಬ್ರಿಟಿಗಳೆಂಬ ಭ್ರಮೆಯಲ್ಲಿ, ಸರ್ವಜ್ಞನೆಂಬ ಅಹಂಕಾರದಲ್ಲಿ, ಅಹಂ ಬ್ರಹ್ಮಾಸ್ಮಿಯಂತೆ ಮೆರೆಯುತ್ತಾ ಒಣ ಪೋಸು ಕೊಡುವ ಸಾಮಾಜಿಕ ಸಮಸ್ಯೆಗಳ ಸೃಷ್ಟಿಕರ್ತರು ಇರ್ತಾರೆ. ಇವರು ಇತರರನ್ನು, ಇತರರ ಪ್ರತಿಭೆಯನ್ನೂ, ಸಾಧನೆಗಳನ್ನೂ ಕಾಲಕಸವಾಗಿ ನೋಡುತ್ತಾ ತಾವು ಮಾತ್ರ ಸರಿ, ತಾವೇಳಿದ್ದೇ ವೇದವಾಕ್ಯ ಎಂಬ ಹುಸಿ ಸೋಗಿನಲ್ಲಿ ಅನ್ಯರನ್ನು ಹಿಯ್ಯಾಳಿಸುವ ಕುತ್ಸಿತ ಬುದ್ದಿಯನ್ನು ಮೆದುಳಿನ ತುಂಬೆಲ್ಲಾ ಹೊದ್ದುಕೊಂಡು ಮೆರೆಯುತ್ತಲೇ ಬಂದಿದ್ದಾರೆ. ಇಂಥವರಿಗೆ ತಮ್ಮಿಂದ ತಪ್ಪಾದಲ್ಲಿ ಅಥವಾ ಇಡೀ ಜಗತ್ತೇ ಇವರು ಮಾಡಿದ್ದು ತಪ್ಪೆಂದು ಮುಖಕ್ಕೆ ಮಂಗಳಾರತಿ ಎತ್ತಿದರೂ ಆ ಬಗ್ಗೆ ಇವರಿಗೆ ಪಶ್ಚಾತ್ತಾಪವೂ ಇರೋಲ್ಲ, ಕ್ಷಮೆ ಕೇಳುವ ಮನಸೂ ಬರೋಲ್ಲ.

ಅಂಥವರ ಸಾಲಿನ‌ ಮಹಾನ್ ಬುದ್ದಿವಂತರೊಬ್ಬರ ನಡವಳಿಕೆ ಹೀಗಿದೆ ನೋಡಿ.

ಮಾಧ್ಯಮಲೋಕದ ಸ್ವಯಂಘೋಷಿತ ಒಬ್ಬ ಸೆಲೆಬ್ರಿಟಿ ಮಹಾನುಭಾವ ಹೇಗಪ್ಪಾ ಅಂದ್ರೆ, ಇಡೀ ಇಂಡಿಯಾದಲ್ಲಿ ತಾನೊಬ್ಬನೇ ಪ್ರಪಂಚ ಸುತ್ತಿ ಬಂದಿರೋದು ಅಥವಾ ತನ್ನಂತಹಾ ಬುದ್ದಿವಂತ ಮತ್ತೊಬ್ಬನಿಲ್ಲ ಎನ್ನುವ‌ ಪಿತ್ಥ ನೆತ್ತಿಗೇರಿಸಿಕೊಂಡು ಅವಕಾಶ ಸಿಕ್ಕಾಗಲೆಲ್ಲಾ ತನ್ನ ಅಂಕಣದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಇತರರನ್ನು ತೀರಾ ಅಸಹ್ಯವಾಗಿ- ವ್ಯಂಗ್ಯವಾಗಿ ಟೀಕಿಸುತ್ತಾ ತನ್ನ‌ ಮನೋವಿಕೃತಿ ಮೆರೆಯುತ್ತಿರುತ್ತಾರೆ. ಈ ತರಹದ ವಿಕೃತಿಯ ಫಲವಾಗಿಯೇ ಇವರು ತನ್ನ‌ ಇತ್ತೀಚಿನ ಅಂಕಣದಲ್ಲಿ ಈ ದೇಶದ ಪ್ರತಿಷ್ಠಿತ ಸಾಂವಿಧಾನಿಕ ಹುದ್ದೆಯಲ್ಲಿರುವವರ ಬಗೆಗೆ ಅವಹೇಳನಕಾರಿಯಾಗಿ ಬರೆದುದಕ್ಕೆ ಎಲ್ಲೆಡೆಯಿಂದ ಛೀಮಾರಿ ಹಾಕಿಸಿಕೊಂಡಾದ ಮೇಲೆ ತಮ್ಮ ಬರಹದಲ್ಲಿ ಆ ಸಾಲುಗಳನ್ನು ಡಿಲಿಟ್ ಮಾಡಿದ್ದರೂ , ಆನಂತರ ಸುಮ್ಮನಿರದೇ ತಾನೇನು ಅಂತಹಾ ಘನಘೋರ ತಪ್ಪು ಮಾಡಿಲ್ಲವೆಂಬಂತೆ ಅದಕ್ಕೆ ಭಂಡ ಸಮರ್ಥನೆಗಳನ್ನು‌ ನೀಡುತ್ತಲೇ ಬಂದಿದ್ದರು.

ಇವರ ಈ ಭಂಡಾವತಾರಕ್ಕಾಗಿಯೇ ರಾಷ್ಟ್ರೀಯ ಮಹಿಳಾ ಆಯೋಗ ಇವರಿಗೆ ನೋಟೀಸ್ ನೀಡಿತ್ತು. ಹೀಗಾಗಿ ಆಯೋಗದ ಮುಂದೆ ಬೇಷರತ್ ಆಗಿ ಕ್ಷಮೆ ಕೇಳಿದ್ದಾರೆಂದು ವರದಿಯಾದ ಮೇಲೆ , ಕೊನೇಪಕ್ಷ ಇವರಿಗೆ ಅವರ ತಪ್ಪಿನ‌ ಅರಿವಾದರೂ ಅಯಿತಲ್ಲ ಎಂಬ ಸಮಾಧಾನ‌ ಇತ್ತು. ಆದರೆ ಇಂದು ಅದೇ‌ ಮಹಾಶಯ‌ ಮತ್ತೇ‌ ಹೇಳಿಕೆ ನೀಡಿ ” ತಾನು ಕ್ಷಮೆಯಾಚಿಸಿಲ್ಲ, ಕೇವಲ ವಿಷಾದ ವ್ಯಕ್ತಪಡಿಸಿದ್ದೇನೆ” ಎಂದು ಪುಂಗಿದ್ದಾರೆ. ಅಂದರೆ Again…..ತನ್ನದೇನೂ ತಪ್ಲಿಲ್ಲ ಎಂಬ ಹಳೆಯ ವಾದಸರಣಿ ಅಥವಾ ತಾನು ತಪ್ಪು ಮಾಡುವವನೇ ಅಲ್ಲ ಎಂಬ ದಾರ್ಷ್ಟ್ಯ ಮನೋಭಾವ ಇವರ ಹೇಳಿಕೆಯಲ್ಲಿ ಸ್ಪಷ್ಟವಾಗಿದೆ.

ವಿಪರ್ಯಾಸವೆಂದರೆ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವವರ ಬಗೆಗೆ ಈ ಸೀನಿಯರ್ ಸೆಲೆಬ್ರಿಟಿ ಪತ್ರಕರ್ತರು ಬರೆದ ಅವಹೇಳನಕಾರಿ ಬರಹವನ್ನಾಗಲೀ ಅಥವಾ ಜಟ್ಟಿ ಕೆಳಗೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಅದನ್ನು ಸಮರ್ಥಿಸಿಕೊಳ್ಳುವ ಇವರ ವರ್ತನೆಯನ್ನಾಗಲೀ ಯಾವೊಬ್ಬ ರಾಜಕೀಯ ನಾಯಕರೂ, ಪಕ್ಷಗಳೂ ಅಥವಾ ಮಾಧ್ಯಮದ ಯಾರೇ ಆಗಲೀ ಕೊನೇಪಕ್ಷ ಬಾಯಿ ಮಾತಿಗಾದರೂ ಅದು ತಪ್ಪು ಎಂದು ಹೇಳಲಿಲ್ಲ. ಇದು ನನಗೆ ಎಲ್ಲಕ್ಕಿಂತ ಅಚ್ಚರಿಯಂತೆ ತೋರುತ್ತಿದೆ.

ಈ ಹಿಂದೆ ಕಂಗನಾ ರಣಾವತ್ ಎಂಬ ಬಾಲಿವುಡ್ ನಟಿ ” ದೇಶಕ್ಕೆ 1947 ರಲ್ಲಿ‌ ಸಿಕ್ಕಿದ್ದು ‌ಸ್ವಾತಂತ್ರ್ಯ ಅಲ್ಲ‌ ಭಿಕ್ಷೆ ” ಎಂಬ ದೇಶದ್ರೋಹದ ಹೇಳಿಕೆ ನೀಡಿದಾಗಲೂ ಅದನ್ನು ಯಾವೊಬ್ಬ ರಾಜಕೀಯ ಮುಖಂಡರಾಗಲೀ ಅಥವಾ ಸಾಮಾಜಿಕ ಜಾಲತಾಣಗಳಲ್ಲಾಗಲೀ ಯಾರೂ ಖಂಡಿಸದೇ ಅದೊಂದು ದೊಡ್ಡ ಸುದ್ದಿಯಾಗದೇ ಹೋಗಿದ್ದೂ ಸಹ ಅಷ್ಟೇ ಅಚ್ಚರಿ ಮೂಡಿಸಿತ್ತು.!

ಯಾವುದೋ ಸಿನಿಮಾ ದೃಶ್ಯಗಳಲ್ಲಿ ಆಕಸ್ಮಿಕವಾಗಿ ಕಥೆಗನುಗುಣವಾಗಿ ಏನೋ ಕೆಲ ಅಂಶಗಳು ಕಂಡು ಬಂದರೆ ಅದನ್ನು ಒಪ್ಪದೇ, ಸಿನಿಮಾ ಎಂದು ಸಹಾ ನೋಡದೇ ಕರುಳು ಗಂಟಲಿಗೆ ಕಿತ್ತು‌ ಬರುವಂತೆ ‌ಮೀಡಿಯಾಗಳ ಮುಂದೆ ಅತ್ಯುಗ್ರವಾಗಿ ಪ್ರತಿಭಟಿಸಿ ಸುದ್ದಿ ಮಾಡುವ ಸೋ ಕಾಲ್ಡ್ ಸೋಷಿಯಲ್ ಮೀಡಿಯಾ ಹೋರಾಟಗಾರರಿಗೆ ದೇಶದ ಸ್ವಾತಂತ್ರ್ಯಕ್ಕೆ , ದೇಶದ ಉನ್ನತ ಹುದ್ದೆಗೆ, ಒಬ್ಬ ಮಹಿಳೆಗೆ ಅಪಮಾನವಾಗುವಂತಹಾ ‌ಹೇಳಿಕೆಗಳು, ಬರಹಗಳು….. ಕಿಂಚಿತ್ತಾದರೂ ಸಂವೇದನೆಯನ್ನು ಸೃಜಿಸದೇ ಹೋದವೇ …? ಅಂದರೆ ಈ ತರಹದ ಸಮೂಹ ನಿಷ್ಕ್ರಿಯತೆ ಪರೋಕ್ಷವಾಗಿ ಅವರ ಅವಹೇಳನಕಾರಿ ಬರಹವನ್ನು ಸಮರ್ಥಿಸಿದಂತಾಗಲಿಲ್ಲವೇ ?

ಇದನ್ನೆಲ್ಲಾ ನೋಡಿದಾಗ‌ ನಮ್ಮ ಜನಗಳ ಲಾಜಿಕ್ ಏನೆಂಬುದೇ ಅರ್ಥವಾಗುತ್ತಿಲ್ಲ. ಏಕೆಂದರೆ ನಮ್ಮ ನೆಲ, ಜಲ, ನಾಡು, ನುಡಿ , ಸಂವಿಧಾನಕ್ಕೆ ಸಂಬಂಧಿಸಿದ‌ ಈ ಯಾವುದೇ ವಿಚಾರಗಳಲ್ಲಿ ಎಸಗಿದ ತಪ್ಪನ್ನು, ತಪ್ಪು ಎನ್ನುವ ಸಾಮಾನ್ಯ ಸೂಕ್ಷ್ಮತೆ ಕಾಣೆಯಾಗುತ್ತಿರುವುದು, ತಪ್ಪೆಂದು ಹೇಳಲೂ ರಾಜಕೀಯದ ಎಡ ಬಲ ಸಿದ್ದಾಂತಗಳನ್ನು ಹುಡುಕುವುದು ಆರೋಗ್ಯಕರ ಸಮಾಜದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಂತೂ ಅಲ್ಲ.

** ಮರೆಯುವ ಮುನ್ನ**

ಮನುಷ್ಯ ಅಂದ ಮೇಲೆ ಯಾವುದಾದರೂ ಒಂದು ಸಂಧರ್ಭದಲ್ಲಿ ತಪ್ಪು ಅಂತ ಮಾಡಿರುತ್ತಾನೆ. ಅದಕ್ಕೆ ನಾವೂ, ನೀವೂ, ಅವರು, ಇವರು, ಯಾರೂ ಹೊರತಲ್ಲ. ಆದರೆ ಅದು ತಪ್ಪು ಎಂದು ತಿಳಿದ ಮೇಲೆ ಒಂದೇ ಒಂದು ಪಶ್ಚಾತ್ತಾಪದ ಭಾವದೊಂದಿಗೆ ಹೀಗಾಗಬಾರದಿತ್ತು ಎನ್ನುವ ಸಣ್ಣ ಫ಼ೀಲಿಂಗ್ ನೊಂದಿಗೆ ಬಹಿರಂಗವಾಗಿ ಅಥವಾ ಸಂಬಂಧಿಸಿದ ವ್ಯಕ್ತಿಗೆ ನೇರವಾಗಿ ಕ್ಷಮೆಯಾಚಿಸುವುದು ದೊಡ್ಡಗುಣ. ಮೇಲಾಗಿ ಮಾಡಿದ ತಪ್ಪಿಗೆ ಕ್ಷಮೆ ಕೇಳುವುದು ಅಪಮಾನವಲ್ಲ, ಬದಲಿಗೆ ಅದು ಧೈರ್ಯವಂತರು ಮಾತ್ರ ಮಾಡುವ ಕೆಲಸ. ತಪ್ಪು ಮಾಡೋದು ಸಹಜ- ತಿದ್ದಿ ನಡೆಯೋನೇ ಮನುಜ.

ಮಾಡಿದ್ದು ತಪ್ಪೆಂದು ಊರಿಗೆ ಊರೇ ಹೇಳಿದರೂ ಅದು ತಪ್ಪಲ್ಲ ಎಂದೇ ವಾದಿಸಿ ಕೊನೆಗೆ ಒಲ್ಲದ ಮನಸಿನಿಂದ “ತಾನು ಕ್ಷಮೆ ಕೇಳಿಲ್ಲ ವಿಷಾದ ವ್ಯಕ್ತಪಡಿಸಿದ್ದೇನೆ”… ಎಂದಲ್ಲಿ ಅಂತಹ ವ್ಯಕ್ತಿ ಜನರ ದೃಷ್ಟಿಯಿಂದ ದೊಡ್ಡವನಾಗುವುದು ಇರಲಿ, ಇದ್ದ ಸ್ಥಾನಕ್ಕಿಂತಲೂ ಕೆಳಗಿಳಿಯದಿರಲು ಸಾಧ್ಯವೇ ? ಇದು ಸಾಮಾನ್ಯ ಜ್ಞಾನದ ‌ಪರಿಧಿಯೊಳಗೆ ಬರುವ ಆಲೋಚನೆಯಲ್ಲವೇ ?

ಒಬ್ಬ ವ್ಯಕ್ತಿಯ ಆಲೋಚನೆ -ಉದ್ದೇಶಗಳು ಉನ್ನತವಾಗಿ, ಪಾರದರ್ಶಕವಾಗಿದ್ದಾಗ ಮಾತ್ರ ಅಂಥವರಿಂದ ಉನ್ನತ ವರ್ತನೆಗಳನ್ನು ನಿರೀಕ್ಷಿಸಬಹುದು. ಒಂದೊಮ್ಮೆ ಆಲೋಚನೆಗಳಲ್ಲೇ ಹುಳುಕು ಇದ್ದಾಗ ಇದಕ್ಕಿಂತ‌ ಭಿನ್ನವಾದ ಸೀನ್ ಗಳನ್ನು‌ ನೋಡಲು ಸಾಧ್ಯವೇ ?

# ಲಾಸ್ಟ್ ಪಂಚ್ #

ಮಾಡಿದ ತಪ್ಪನ್ನು ತಪ್ಪೆಂದು ಒಪ್ಪಿಕೊಳ್ಳದಿರುವುದೇ ಎಲ್ಲಕ್ಕಿಂತ ದೊಡ್ಡ ತಪ್ಪು.

ಪ್ರೀತಿಯಿಂದ…

ಹಿರಿಯೂರು ಪ್ರಕಾಶ್.

ಒಳ್ಳೆಯತನವಿಲ್ಲದೆಯೂ ಒಳ್ಳೆಯವ,
ಕೆಟ್ಟತನವಿಲ್ಲದೆಯೂ ಕೆಟ್ಟವ…!!

ಒಳ್ಳೆಯತನವಿಲ್ಲದೆಯೂ ಒಳ್ಳೆಯವ,
ಕೆಟ್ಟತನವಿಲ್ಲದೆಯೂ ಕೆಟ್ಟವ…!!
**************************************
ನಮ್ಮೆಲ್ಲರ ನಿತ್ಯ‌ಬದುಕಿನ ಅನುಭವಕ್ಕೆ ಬರುವ ಕೆಲವೊಂದು ಸಂಗತಿಗಳು ತುಂಬಾ ಇಂಟರೆಸ್ಟಿಂಗ್ ಆಗಿರುತ್ತವೆಯಲ್ಲವೇ.? ನನಗಂತೂ ಅವುಗಳಲ್ಲಿ ಬಹಳಷ್ಟು ನೇರವಾಗಿ ಕನೆಕ್ಟ್ ಆಗಿ , ಮನಕ್ಕೆ ಡೈರೆಕ್ಟಾಗಿ ನಾಟಿ ಕುತೂಹಲ ಹುಟ್ಟಿಸಿ ನಿಮ್ಮೊಂದಿಗೆ ಹಂಚಿಕೊಳ್ಳುವಂತೆ ಮಾಡುತ್ತವೆ.

ಅಂಥವುಗಳಲ್ಲಿ ಇದೂ ಒಂದು ….ಹಾಗೆಯೇ ಕ್ಷಣಕಾಲ ಅವಲೋಕಿಸಿ.

ನಿಮ್ಮಲ್ಲಿ ಒಳ್ಳೆಯತನವಿದ್ದು, ಆಂತರ್ಯದಲ್ಲೂ ಒಳ್ಳೆಯದನ್ನೇ ಯೋಚಿಸುತ್ತಾ ಇತರರಿಗೂ ಒಳ್ಳೆಯದನ್ನೇ ಬಯಸುತ್ತಾ , ಸಾರ್ವಜನಿಕವಾಗಿಯೂ ಸದಾ ಒಳ್ಳೆಯದನ್ನೇ ಮಾಡುವವರಾಗಿದ್ದಲ್ಲಿ ಸಹಜವಾಗಿ ನೀವು ಎಲ್ಲೆಡೆ ” ಒಳ್ಳೆಯವನು” ಎಂದೇ ಎಂದು ಬ್ರಾಂಡ್ ಆಗುತ್ತೀರಿ. ಹಾಗೆಯೇ ಒಬ್ಬ ವ್ಯಕ್ತಿಯಲ್ಲಿ ಕೇವಲ ದುಷ್ಟ ಆಲೋಚನೆಗಳೇ ತುಂಬಿದ್ದು ಆತನಿಂದ ಸಮಾಜಕ್ಕೆ ಕೆಡುಕೇ ಆಗುವಂತಿದ್ದರೆ ಅವನನ್ನು “ಕೆಟ್ಟವನು” ಎಂದು ಸಮಾಜ ಬಿಂಬಿಸಬೇಕು.

– ಇದು ಯಾವುದೇ ಗೊಂದಲವಿಲ್ಲದೇ ಸಿಂಪಲ್ ಅಂಡ್ ಲಾಜಿಕಲೀ ಕರೆಕ್ಟ್ ಆದ ನೇರಾನೇರ ಸ್ಟೇಟ್ ಮೆಂಟು !. ಸರೀನಾ..?

ಆದರೆ ಇನ್ನೂ ಎರಡು ವಿಚಿತ್ರವಾಗಿರುವ ಹಾಗೂ ಸಲೀಸಾದ ಅದೃಷ್ಟದ ಟ್ಯಾಗ್ ಇರುವ – ಹಾಗೂ ಬೇಜಾನ್ ದುರಾದೃಷ್ಟದ ನೆರಳಿರುವ ಎರಡು ವರ್ಗಗಳ ಜನರಿದ್ದಾರೆ.

ಅಂಥವರಲ್ಲಿ ಒಂದು ವರ್ಗದವರ ಅದೃಷ್ಟ ಎಂದರೆ ತಾವು ಅಂತರಂಗವಾಗಿ ಒಳ್ಳೆಯವರಲ್ಲದಿದ್ದರೂ, ತಮ್ಮ ಜೇಬಿಂದ ಯಾರಿಗೂ ಒಂದು ರೂಪಾಯಿ ಖರ್ಚು ಮಾಡಿದ ಟ್ರ್ಯಾಕ್ ರೆಕಾರ್ಡ್ ಅವರ ಪುರಾತತ್ವ ಇತಿಹಾಸಗಳ ಪರಂಪರೆಯಲ್ಲಿಯೇ ಇಲ್ಲದಿದ್ದರೂ ಅಥವಾ ಕೊನೇಪಕ್ಷ ಇತರರಿಗೆ ಒಳ್ಳೆಯದನ್ನು ಬಯಸುವ ಮನಸು ಕೂಡಾ ಇರದಿದ್ದರೂ ಅವರ ಬಾಹ್ಯ ಇಮೇಜಿಗೆ ಶರಣಾಗುವ ನಮ್ಮ ಸಮಾಜ ಅದು ಹೇಗೋ..
” ಇವನು ತುಂಬಾ ಒಳ್ಳೆಯವನು, ಸಕತ್ ಸಾಫ಼್ಟ್” ಎಂದೇ ಬ್ರಾಂಡ್ ಮಾಡುವುದರ ಜೊತೆಗೆ ಅಂಥವರ ಫ಼ೇಸ್ ವ್ಯಾಲ್ಯೂ ಸಿಕ್ಕಾಪಟ್ಟೆ ಫ಼ೇಮಸ್ ಆಗಿಯೇ ಪ್ರಚಾರ ಪಡೆದುಕೊಂಡಿರುತ್ತೆ.

ಅದಕ್ಕೇ ಹೇಳಿದ್ದು ಅಂಥವರದ್ದು ಅನಾಮತ್ತು ಅದೃಷ್ಟದ ಅಲೆಯಲ್ಲಿ ತೇಲುವವರ ವರ್ಗ ಎಂದು !

ಅಷ್ಟೇ ಆಗಿದ್ದರೆ ಪರವಾಗಿಲ್ಲ. ಇದೇ ಗುಂಪಿನಲ್ಲಿ ಬರುವ ಇನ್ನೂ ಕೆಲವರು ಅಂತರಂಗದಲ್ಲಿ ಪರಮ ಸ್ವಾರ್ಥಿಗಳೂ, ಕೆಡುಕರೂ , ಕುತಂತ್ರಿಗಳು ಆಗಿದ್ದರೂ ಸಹ ಅವರ ಬಾಹ್ಯ ಇಮೇಜು ಸಕತ್ ಸಾಫ಼್ಟ್ ಆಗಿ ಪ್ರೊಜೆಕ್ಟ್ ಆಗಿರುತ್ತದೆ. ಹೊರಗೆ ಥಳುಕು- ಒಳಗೆ ಹುಳುಕು ಇದ್ದರೂ ” ಇವ ಒಳ್ಳೆಯವ ” ಎನ್ನುವ ಟ್ಯಾಗ್ ಇರುವ ಒಂಥರಾ ಅದೃಷ್ಟ ಇವರದ್ದು.

ಬಹುಶಃ ಇಂಥವರು ಹೀಗೆ‌ ಬ್ರಾಂಡ್ ಆಗಲಿಕ್ಕೆ ಅವರ ನಡೆ, ನುಡಿ , ಸಮಯೋಚಿತ ವರ್ತನೆ, ಸಂಧರ್ಭಕ್ಕನುಗುಣವಾದ ಸಕಲ ಕಲಾಭಿನಯ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಅದೃಷ್ಟದ ಸಾಥ್ ಎಲ್ಲವೂ ಕಾರಣವಿದ್ದಿರಬಹುದು.

ಇವರೆಲ್ಲಾದರೂ ಹೋಗಲಿ‌ ಬಿಡಿ ! ಅವರದು ಸ್ಪೆಷಲ್ ಲಕ್ ! ಹೀಗಾಗಿ ಆ‌ ಬಗ್ಗೆ ನಮಗೆ ಅಂಥವರ ಬಗ್ಗೆ ಯಾವ ರಾಗವೂ ಇಲ್ಲ , ಅಸೂಯೆಯೂ ಇಲ್ಲ.

ಆದರೆ ನನ್ನಲ್ಲಿ ಅತ್ಯಂತ ಅನುಕಂಪ, ಅತೃಪ್ತಿ, ವಿಷಾದ ಹಾಗೂ ಕರುಣೆ ಉಂಟಾಗುವುದು ಮತ್ತೊಂದು ವರ್ಗದ ಜನರ ಬಗೆಗೆ.

ಈಗ ಆ ದುರದೃಷ್ಟವಂತರಾರೆಂದು ನೋಡೋಣ.

ಇವರು ತಮ್ಮ ಆಂತರ್ಯದಲ್ಲಿ , ಬಾಹ್ಯದಲ್ಲಿ ಸದಾ ಒಳ್ಳೆಯದನ್ನೇ ಯೋಚಿಸಿ ತಮ್ಮಿಂದಾಗುವ ಎಲ್ಲಾ ತರಹದ ಸಹಾಯವನ್ನು, ಸೇವೆಯನ್ನು, ತಮ್ಮ ಇತಿಮಿತಿಯೊಳಗಿನ ಹಾಗೂ ಅದರಾಚೆಗಿನ ಉಪಕಾರವನ್ನು ಇತರರಿಗಾಗಿ ಮಾಡುತ್ತಲೇ ಇರುತ್ತಾರೆ. ಕನಸಲ್ಲೂ ಬೇರೆಯವರ ಬಗೆಗೆ ಕೇಡು ಎಣಿಸದ ಈ ವರ್ಗದ ಜನರನ್ನು ಕೆಲವರು ಮಾತ್ರ ಅದೇಕೋ ಇವರು ಸ್ವಾರ್ಥಿಗಳು, ಅಹಂಕಾರಿಗಳು, ಕೆಡುಕರು, ಯಾರಿಗೂ ಒಳ್ಳೆಯದನ್ನು ಮಾಡುವವರಲ್ಲ…. ಎಂಬಿತ್ಯಾದಿಯಾಗಿ ವಿಲನ್ ರೀತಿಯಲ್ಲಿ ಬಿಂಬಿಸಿರುತ್ತಾರೆ. ಇವರು ಏನೇ‌ ಒಳ್ಳೆಯದನ್ನು ಮಾಡಿದರೂ ಅದಕ್ಕೆ ಸಿಗಬೇಕಾದ ಮಾನ್ಯತೆ ಸಿಗೋಲ್ಲ. ಮಾನ್ಯತೆ ಸಿಗದಿದ್ದರೂ ಪರವಾಗಿಲ್ಲ, ಆದರೆ ಅದಕ್ಕಿಂತ ದೊಡ್ಡ ವಿಪರ್ಯಾಸವೆಂದರೆ ಇಂಥವರಿಂದ ಸಾಕಷ್ಟು ಉಪಕಾರ ಪಡೆದ ಜನರೇ ಅವರನ್ನು ಕೊನೆಗೆ ನಿಷ್ಠುರಕ್ಕೆ, ಆರೋಪಕ್ಕೆ, ಅಪಮಾನಕ್ಕೆ ಗುರಿ ಮಾಡಿ, ಸ್ಮರಣೆಯಿಲ್ಲದ ಕೃತಘ್ನರಾಗಿ ವಿನಾಕಾರಣ ಉಪಕರಿಸಿದವರನ್ನು ದ್ವೇಷಿಸುತ್ತಲೇ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ ಇಲ್ಲವೇ ದೂರಸರಿದು ಬಿಡುತ್ತಾರೆ. !

ಒಂದೇ ಸಾಲಿನಲ್ಲಿ ಸರಳವಾಗಿ ಹೇಳುವುದಾದರೆ ಈ ವರ್ಗದ ಜನರದ್ದು ಇತರರಿಗೆ ಕಾಯಾ, ವಾಚಾ, ಮನಸಾ ಒಳ್ಳೆಯದನ್ನು ಬಯಸಿ, ಒಳ್ಳೆಯದನ್ನು ಮಾಡಿ, ಕೊನೆಗೆ ಕೆಟ್ಟವನೆಂಬ ನಿಷ್ಠುರದ ಪಟ್ಟ ಅಥವಾ ಆರೋಪದ ಭಾರ ಹೊತ್ತುಕೊಳ್ಳುವ ಪರಮ ದುರಾದೃಷ್ಟ ವರ್ಗ.!

ನೋಡಲಿಕ್ಕೆ ಕೇಳಲಿಕ್ಕೆ ತುಂಬಾ ಪೆಕ್ಯೂಲಿಯರ್ ಅನಿಸೋಲ್ವೇ‌..?

ಅಲ್ಲಪ್ಪಾ….ಒಳ್ಳೆಯವರೂ ಅಂತೀರ, ಯಾರಿಗೂ ಕೆಟ್ಟದ್ದು ಬಯಸೋಲ್ಲ ಅಂತೀರಾ… ಹಾಗಿದ್ದ ಮೇಲೆ ನಿಷ್ಠುರ ಹೊತ್ತುಕೊಳ್ಳುವುದೇಕೆ ಎಂಬ ನಿಮ್ಮೆಲ್ಲರ ಬೇಸಿಕ್ ಡೌಟು ನನಗೂ ಸಾಕಷ್ಟು ಬಾರಿ ಕಾಡಿದ್ದಿದೆ. ಇದಕ್ಕೆ ಅಂಥವರಲ್ಲಿ ಒಳ್ಳೆಯತನವಿದ್ದರೂ ಅದನ್ನು ಪ್ರೊಜೆಕ್ಟ್ ಮಾಡಿಕೊಳ್ಳುವಲ್ಲಿ ಸೋಲುವುದು ಕಾರಣವೋ ಅಥವಾ ಉಪಕೃತರಾದ ಜನರ ಸ್ವಭಾವವೇ ಹಾಗೆಯೋ…ಇಲ್ಲವೇ ಒಳ್ಳೆಯದು ಬಯಸುವವರಿಗೆಲ್ಲಾ ಹೀಗೆಯೇ ಹಾಗೋದು ಎಂಬ ನಿಯಮವೋ…. ? ಸುಲಭಕ್ಕೆ ಅರ್ಥವಾಗೋದು ಕಷ್ಟ. ಇದೊಂದು‌ ಸಂಕೀರ್ಣವಾದ ಜಿಜ್ಞಾಸೆ. ಇದನ್ನು ಹೀಗೇ ಎಂದು ಹಿಡಿದಿಡುವುದು ಕಷ್ಟವಾದರೂ ಸ್ವಲ್ಪಮಟ್ಟಿಗೆ ಒಳಹೊಕ್ಕು ನೋಡಿದಾಗ …..

ಈ ವರ್ಗದ ಒಳ್ಳೆಯವರಲ್ಲಿ ಕೆಲವರು ಇತರರಿಗೆ ಒಳ್ಳೆಯದನ್ನು ಮಾಡುವ ಗುಣವಿದ್ದರೂ ತಮ್ಮ ನೇರವಾದಿತನ, ಪರಮ ಶಿಸ್ತು , ನಿಯತ್ತು ಹಾಗೂ ತಮ್ಮಲ್ಲಿರುವ ಪಾಸಿಟಿವ್ ಅಂಶಗಳನ್ನು ಇತರರಲ್ಲಿಯೂ ಯಥಾವತ್ತಾಗಿ ನಿರೀಕ್ಷಿಸುವುದು ಅಥವಾ ಇತರರ ತಪ್ಪನ್ನು‌ ತಪ್ಪೆಂದು ಮುಖಕ್ಕೆ ಹೊಡೆದ ಹಾಗೆ ನೇರವಾಗಿ ಹೇಳುವುದು….ಇತ್ಯಾದಿ ಕೆಲ ಗುಣ‌ಸ್ವಭಾವಗಳಿಂದಾಗಿ ತಾವು ಮಾಡಿದ ಒಳ್ಳೆಯ ಕೆಲಸಗಳ ಕ್ರೆಡಿಟ್ಟು ಇಂಥವರಿಗೆ ಸುಲಭಕ್ಕೆ ಸಿಗೋಲ್ಲ. ಅಷ್ಟೇ ಅಲ್ಲ, ನೀವು ನಿಮ್ಮ ಬಗ್ಗೆ ಆರೋಪಿಸುವವರಿಗಿಂತ ವಿದ್ಯೆ‌,ಬುದ್ದಿ , ಹಣ, ಪ್ರತಿಭೆ ಸೌಂದರ್ಯ ಇತ್ಯಾದಿಗಳಲ್ಲಿ ಮುಂದೆ ಇದ್ದಿರೋ ಆಗ ನಿಮ್ಮ ತಪ್ಪಿಲ್ಲದೆಯೂ ವಿಲನ್ ಪಟ್ಟಕ್ಕೆ ವಾರಸುದಾರರಾಗಬೇಕಾಗುತ್ತದೆ.

ಜನರಿಗೆ ಕೇವಲ ನಿಮ್ಮ‌ ಒಳ್ಳೆಯತನದ ಕೆಲಸವಷ್ಟೇ ಸಾಲದು , ತಮ್ಮನ್ನು ಹರ್ಟ್ ಮಾಡದಂತೆ ಸವಿಯಾಗಿ ಮಾತನಾಡಿಸುವುದನ್ನು ನಿರೀಕ್ಷಿಸುತ್ತಾರೆ. ಯಾರ ಬಗೆಗಾದರೂ ಎಲ್ಲರೆದುರು ನೇರವಾಗಿ ಕಹಿ ಸತ್ಯವನ್ನು ಹೇಳಿದಲ್ಲಿ, ಅಥವಾ ಅವರ ಮುಖಕ್ಕೆ‌ ಹೊಡೆದಂತೆ ಮಾತನಾಡಿದಲ್ಲಿ ನೀವೆಷ್ಟೇ ಒಳ್ಳೆಯ ಕೆಲಸ ಮಾಡಿದ್ದರೂ ಅದು ಅವರಿಗೆ ಅಪಥ್ಯವಾಗಿ ಕೊನೆಗೆ ನೀವು ಮಾಡಿರಬಹುದಾದ ಒಳ್ಳೆಯ ಕೆಲಸವೆಲ್ಲಾ ಲೆಕ್ಕಕ್ಕೆ ಬಾರದೇ ಪಕ್ಕಕ್ಕೆ ಹೋಗಿ ಬಿಡುವಂತಾಗುತ್ತದೆ.

ಈ ವೈಪರೀತ್ಯಕ್ಕೆ ಕೆಲ ಬುದ್ದಿವಂತರು ಹೇಳೋದು,

” ನಿಮ್ಮಲ್ಲಿ ಕೇವಲ ಒಳ್ಳೆಯತನವೊಂದಿದ್ದರೆ ಸಾಲದು, ಅದನ್ನು ಪ್ರೊಜೆಕ್ಟ್ ಮಾಡಿಕೊಳ್ಳುವ ಕಲೆ ಕೂಡಾ ಗೊತ್ತಿರಬೇಕು. ಅಥವಾ ಇಂಚಿನಷ್ಟು ಉಪಕಾರ ಮಾಡಿ ಎಕರೆಯಷ್ಟು ಪ್ರಚಾರ ಪಡೆಯುವ ಲಲಿತಕಲೆ ಸಿದ್ದಿಸಿರಬೇಕು” ! ಇದನ್ನು ರೂಢಿಸಿಕೊಂಡಾಗ ಉಪಕಾರ ಮಾಡಿಯೂ ಕೆಟ್ಟ ಹೆಸರು ಪಡೆದುಕೊಳ್ಳುವ ವಿಲನಿಯಸ್ ಸ್ಟೇಟಸ್ ನಿಂದ ಬಚಾವಾಗಬಹುದು.”…..ಎಂದು..!

ಆದರೆ ಇವೆಲ್ಲವೂ ಹೇಳಿದರೆ -ಕೇಳಿದರೆ ಬರುವಂಥವುಗಳಲ್ಲ . ಇವು ಮೊದಲಿನಿಂದಲೂ ರಕ್ತಗತವಾಗಿ ರೂಢಿಸಿಕೊಂಡ ಗುಣಗಳು. ಯಾರದೋ ಸಂತೋಷಕ್ಕೆ, ಮತ್ತಾರಿಂದಲೋ ಒಳ್ಳೆಯ ಹೆಸರು ಪಡೆಯಲಿಕ್ಕೆ ವ್ಯಕ್ತಿತ್ವವನ್ನು, ಗುಣ ಸ್ವಭಾವಗಳನ್ನು‌ ಬದಲಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಹಾಗಂತ ಅವುಗಳಿಂದ ಸಿಕ್ಕಿಹಾಕಿಕೊಳ್ಳುವ ಆರೋಪಗಳು, ಅಪಪ್ರಚಾರಗಳಿಂದ ಮನಸು ಘಾಸಿಯಾಗುವುದರಿಂದ ತಪ್ಪಿಸಿಕೊಳ್ಳುವುದೂ ಸುಲಭವಲ್ಲ. ಹೀಗಾಗಿಯೇ ಈ ವರ್ಗವನ್ನು ದುರದೃಷ್ಟಕರ ವರ್ಗ ಎಂದು ಕ್ಲಾಸಿಫ಼ೈ ಮಾಡಿದ್ದು.

ಯಾವುದೇನೇ ಇರಲಿ, ಒಳ್ಳೆಯತನವಿದ್ದೂ ಕೆಟ್ಟ ಹೆಸರು ತಗಲಾಕಿಕೊಳ್ಳುವುದು ಹಾಗೆಯೇ ಕೆಟ್ಟತನವಿದ್ದೂ ಒಳ್ಳೆಯ ಹೆಸರು ಬಂದು ತೆಕ್ಕೆಗೆ ಬೀಳುವುದು ವಿಪರ್ಯಾಸದ ವಿನೋದವೋ, ವಿಧಿಯಾಟದ ವಿಪರೀತವೋ…..ದೇವರೇ ಬಲ್ಲ !

** ಮರೆಯುವ ಮುನ್ನ **

ಅರೋಪ ಪ್ರತ್ಯಾರೋಪಗಳು ಸಾವಿರ ಇರಲಿ,
ಜೀವನದಲ್ಲಿ ಒಬ್ಬರಿಗೆ ಒಳ್ಳೆಯದನ್ನು ಮಾಡುವ ಅವಕಾಶವಿದ್ದಾಗ ಅದನ್ನು ಮನಸಾರೆ ಮಾಡಿಬಿಡಿ . ಆದರೆ ಯಾವುದೇ ಕಾರಣಕ್ಕೂ ಮಾಡಿದ ಉಪಕಾರಕ್ಕೆ ಬದಲಾಗಿ ನಿರೀಕ್ಷೆಯ ಸಣ್ಣ ಎಳೆಯನ್ನೂ ಇಟ್ಟುಕೊಳ್ಳಬೇಡಿ. ಉಪಕಾರ ಪಡೆದವರು ಕೃತಜ್ಞತೆ ಹೇಳುವರೋ ಅಥವಾ ಕೃತಘ್ನರಾಗುವರೋ ಎಂಬ ಬಗೆಗೆ ತಲೆಕೆಡಿಸಿಕೊಳ್ಳದೇ ನಿಮ್ಮ ಮನಸ್ಸಿಗೆ ಸರಿ ಅನಿಸಿದ್ದನ್ನು ಇತರರಿಗೆ ಒಳ್ಳೆಯದಾಗುವಂತಿದ್ದರೆ ಮಾಡಿ ಮುಗಿಸಿ ,ಜಸ್ಟ್ Forget it…. ! ಸಹಾಯ ಮಾಡಲು ಆಗಲಿಲ್ಲವಾ.., ಪ್ರಾಮಾಣಿಕವಾಗಿ ಅದನ್ನು ತಿಳಿಸಿ ಮನದಲ್ಲೇ ಹಾರೈಸಿ ಸುಮ್ಮನಾಗಿ.

ಮೂಳೆ ಮಾಂಸಗಳ ಮೇಲೆ ಚರ್ಮವನ್ನು ಹೊದ್ದು, ನಾನಾ ತರಹದ ಭಾವನೆಗಳಲ್ಲಿ ಮಿಂದೆದ್ದು, ಉಪ್ಪು ಹುಳಿ ಖಾರ ತಿಂದು ಬದುಕುವ ಮನುಷ್ಯ ಈ ತಂತ್ರಜ್ಞಾನ ಯುಗದಲ್ಲಿ ಹೀಗೆ ಪ್ರಚಾರದ ಸದ್ದಿಲ್ಲದೇ ಇತರರಿಗೆ ಒಳ್ಳೆಯದನ್ನು ಮಾಡಿ ಸಂತನಂತಿರುವುದು ಕಷ್ಟವೇ ಆದರೂ, ಕೊನೇಪಕ್ಷ ಮನಸಿನ ನೆಮ್ಮದಿಗಾದರೂ ಹೀಗಿರುವುದನ್ನು ಅವನು ಅಭ್ಯಾಸ ಮಾಡಿಕೊಳ್ಳಲೇ ಬೇಕು. ಆರೋಪಗಳಿಗೆ ಅಪಪ್ರಚಾರಗಳಿಗೆ ಕುಗ್ಗದೇ ಇರುವ ಸ್ಥಿತಪ್ರಜ್ಞತೆ ಬೆಳೆಸಿಕೊಂಡಲ್ಲಿ ಅದು ಯಾರೂ ಕಸಿಯಲಾರದ ಆತ್ಮವಿಶ್ವಾಸವನ್ನು ನಮ್ಮಲ್ಲಿ ತುಂಬುತ್ತದೆ.

ಅದನ್ನು ಬಿಟ್ಟು ಇತರರಿಗೆ ಒಳ್ಳೆಯದನ್ನು ಮಾಡಿಯೂ ಕೆಟ್ಟ ಹೆಸರು ಬಂದಲ್ಲಿ , ನಿಮ್ಮಿಂದ ಸಹಾಯ ಪಡೆದು ನಿಮ್ಮನ್ನೇ ದೂಷಿಸಿದಲ್ಲಿ ಅದಕ್ಕೆ ನಿಮ್ಮ ಹಣೆಬರಹ, ನಕ್ಷತ್ರ, ದುರಾದೃಷ್ಟ‌, ಬ್ಯಾಡ್ ಟೈಮ್, ಜನರೇ ಸರಿಯಿಲ್ಲ…. ಎನ್ನುತ್ತಾ ಇನ್ನು ಮುಂದೆ ಯಾರಿಗೂ ಒಳ್ಳೆಯದನ್ನೇ ಮಾಡಬಾರದೆಂಬ ನೆಗೆಟೀವ್ ಥಾಟ್ಸ್ ಗಳು ಮನಸನ್ನು ಆಕ್ರಮಿಸಿಕೊಳ್ಳಲೂ‌ ಬಹುದು !

ಹಾಗಾಗಲು‌ ಬಿಡಬೇಡಿ. ಹಾಗೆಯೇ….

” ಅಗತ್ಯಕ್ಕಿಂತ ಜಾಸ್ತಿ ಒಳ್ಳೆಯವರೂ ಆಗಬೇಡಿ.”!

# ಲಾಸ್ಟ್ ಪಂಚ್ #

” ಸುಂದರವಾಗಿರುವವರು ಎಲ್ಲಾ ಕಾಲದಲ್ಲಿಯೂ ಒಳ್ಳೆಯವರಾಗಿರಲು ಸಾಧ್ಯವಿಲ್ಲ. ಆದರೆ ಒಳ್ಳೆಯತನವಿದ್ದವರು ಸದಾ ಕಾಲವೂ ಸುಂದರವಾಗಿಯೇ ಇರಬಲ್ಲರು !

ಪ್ರೀತಿಯಿಂದ…

ಹಿರಿಯೂರು ಪ್ರಕಾಶ್.

ಕನ್ನಡಮ್ಮನ ರಾಜ್ಯೋತ್ಸವ

ಕನ್ನಡಮ್ಮನ ರಾಜ್ಯೋತ್ಸವ
ಭಾರತ ದೇಶದ ವೀರರು ನಾವು
ಶೂರರಾಗಿ ಬಾಳೋಣ
ಮಹಾತ್ಮರ ವೇಷ-ಭೂಷಣ ಹಾಕೋಣ
ರಾಜ್ಯೋತ್ಸವವ ಮಾಡೋಣ.
ಎಲ್ಲರೂ ಒಂದಾಗಿ ಸೇರೋಣ
ವಿಧವಿಧ ವೇಷವ ಧರಿಸೋಣ
ನಾಡಿನ ಗಣ್ಯರ ಕರೆಯೋಣ
ನಾಡಿನ ಶೂರರ ಸ್ಮರಿಸೋಣ.
ಬೀದಿ ಬೀದಿಗಳಲ್ಲಿ ಸಾಗೋಣ
ಮಹಾತ್ಮರ ಪಾತ್ರವ ತೋರಿಸೋಣ
ಮಹಾತ್ಮರ ಪಾತ್ರವ ತೋರಿಸುತ ನಾವು
ಅವರಂತೆ ಬಾಳಿರಿ ಎನ್ನೋಣ.
ದೇಶ ಸೇವೆಯ ಮಾಡೋಣ
ವೀರ ಶೂರರಾಗೋಣ
ಕರ್ನಾಟಕದ ಕನ್ನಡಮ್ಮನ
ರಾಜ್ಯೋತ್ಸವವ ಆಚರಿಸೋಣ.
ರಚನೆ :
ನಾಗತಿಹಳ್ಳಿ ಮಂಜುನಾಥ್,
ಹೊಸದುರ್ಗ
ಮೊ. : ೯೯೮೬೯೯೪೫೫೮

You cannot copy content of this page