ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಬಗರ್ ಹುಕುಂ ಯೋಜನೆಯ 41580 ಅರ್ಜಿಗಳನ್ನು ವರ್ಷದೊಳಗೆ ವಿಲೇವಾರಿ ಮಾಡಿ-ಕೃಷ್ಣ ಭೈರೇಗೌಡ

by | 10/10/23 | ಸುದ್ದಿ


ಚಿತ್ರದುರ್ಗ ಅ. 10 :
ಅಕ್ರಮ ಸಕ್ರಮ ಬಗರ್ ಹುಕುಂ ಯೋಜನೆಯಡಿ ಜಿಲ್ಲೆಯಲ್ಲಿ ಸಲ್ಲಿಕೆಯಾಗಿರುವ 41580 ಅರ್ಜಿಗಳನ್ನು ಒಂದು ವರ್ಷದೊಳಗೆ ವಿಲೇವಾರಿ ಮಾಡಿ, ಅರ್ಹ ರೈತರಿಗೆ ಸಾಗುವಳಿ ಚೀಟಿ ನೀಡಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದÀರು.
ಅಕ್ರಮ ಸಕ್ರಮ ಬಗರ್ ಹುಕುಂ ಯೋಜನೆಯಡಿ ಸಾಗುವಳಿ ಚೀಟಿ ನೀಡುವಂತೆ ಚಿತ್ರದುರ್ಗದಲ್ಲಿ ಸುಮಾರು 41,580 ಅರ್ಜಿಗಳು ಸಲ್ಲಿಕೆಯಾಗಿದೆ. ಈ ಅರ್ಜಿಗಳನ್ನು ಮುಂದಿನ ಒಂದು ವರ್ಷದಲ್ಲಿ ವಿಲೇವಾರಿಗೊಳಿಸಬೇಕು. ಅರ್ಜಿ ಸಲ್ಲಿಸಿದವರಲ್ಲಿ, ಸಾಗುವಳಿಯೇ ಮಾಡಿದವರು ಕೂಡ ಇರುವ ಸಾಧ್ಯತೆಗಳಿದ್ದು, ಪರಿಶೀಲನೆ ನಡೆಸಬೇಕು, ಸಮಗ್ರವಾಗಿ ಪರಿಶೀಲಿಸಿ, ಅರ್ಹರಿಗೆ ಸಾಗುವಳಿ ಚೀಟಿ ನೀಡಬೇಕು. ನಮೂನೆ 50, 53, 57ಕ್ಕೆ ಸಂಬಂಧಿಸಿದಂತೆ ಅಕ್ರಮ-ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಲು ಕೋರಿ ಸಾವಿರಾರು ಜನ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈ ಅರ್ಜಿಗಳು ವಿಲೇವಾರಿಯಾಗದ ಕಾರಣ ರೈತರು ದಿನಂಪ್ರತಿ ಸರ್ಕಾರಿ ಕಚೇರಿಗಳಿಗೆ ಅಲೆಯುವಂತಾಗಿದೆ. ಜನರನ್ನು ಹೀಗೆ ಅಲೆಸುವುದು ಸರಿಯಲ್ಲ. ಜನ ಭರವಸೆ ಇಟ್ಟು ಬದಲಾವಣೆ ನಿರೀಕ್ಷೆಯಿಂದ ಹೊಸ ಸರ್ಕಾರ ತಂದಿದ್ದಾರೆ. ಸುಧಾರಣೆ ಕಾರ್ಯರೂಪಕ್ಕೆ ಬರದಿದ್ದರೆ ಪ್ರಜಾಪ್ರಭುತ್ವದ ಆಶಯವೇ ವ್ಯರ್ಥ. ಹೀಗಾಗಿ ಸರ್ಕಾರವೂ ಬಡ ಜನರ ಪರ ಕೆಲಸ ಮಾಡಲು ಬದ್ಧವಾಗಿದೆ. ಆದರೆ, ಸರ್ಕಾರದ ದ್ಯೇಯೋದ್ದೇಶ ಈಡೇರಲು ಅಧಿಕಾರಿಗಳ ಸಹಕಾರ ಮುಖ್ಯ. ಹೀಗಾಗಿ ಮುಂದಿನ ಒಂದು ವರ್ಷದಲ್ಲಿ ಬಗರ್ ಹುಕುಂ ಅರ್ಜಿಗಳನ್ನು ವಿಲೇಗೊಳಿಸಿ. ಅರ್ಹರಿಗೆ ಸಾಗುವಳಿ ಚೀಟಿ ನೀಡಬೇಕು. ಅಧಿಕಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ “ಬಗರ್ ಹುಕುಂ ಆ್ಯಪ್” ಅಭಿವೃದ್ಧಿಪಡಿಸುತ್ತಿದ್ದು ಇದರ ಸಹಾಯದಿಂದ ಸ್ಯಾಟಲೈಟ್ ಇಮೇಜ್ ಪಡೆದು ನೈಜ ಸಾಗುವಳಿದಾರರನ್ನು ಗುರುತಿಸಬಹುದು. ಅಲ್ಲದೆ, ಇ-ಸಾಗುವಳಿ ಚೀಟಿಯನ್ನೂ ನೀಡಬಹುದು” ಎಂದರು.
ಸರ್ಕಾರಿ ಆಸ್ತಿಗಳ ರಕ್ಷಣೆಗೆ ಕ್ರಮ:
ರಾಜ್ಯದಲ್ಲಿನ ಸರ್ಕಾರಿ ಆಸ್ತಿಗಳ ರಕ್ಷಣೆಗೆ ಕ್ರಮವಹಿಸಲಾಗಿದ್ದು, ಸರ್ಕಾರಿ ಆಸ್ತಿ ದಾಖಲೆನಗಳನ್ನು ನಮೂದಿಸಲು ಆಪ್ ಅಭಿವೃದ್ಧಿ ಪಡಿಸಿ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಮೂಲ ನೋಂದಣಿ ಸಂಖ್ಯೆ ಆಧರಿಸಿ, ಸರ್ಕಾರಿ ಆಸ್ತಿಗಳ ನೊಂದಣಿ ಆಸ್ತಿ ಮಾಡಲಾಗುತ್ತದೆ. ಚಿತ್ರದುರ್ಗ ಜಿಲ್ಲೆಯಲ್ಲಿ 2023ರ ಸೆಪ್ಟೆಂಬರ್ ಆರಂಭದಲ್ಲಿ 4447 ಸರ್ಕಾರಿ ಆಸ್ತಿಗಳ ಪ್ಲಾಗಿಂಗ್ ಮಾಡಲಾಗಿದೆ. ಸೆಪ್ಟೆಂಬರ್‍ನಿಂದ ಅಕ್ಟೋಬರ್ ಆರಂಭದವರೆಗೆ ಜಿಲ್ಲೆಯಲ್ಲಿ 3326 ಸರ್ಕಾರಿ ಆಸ್ತಿಗಳ ಪ್ಲಾಗಿಂಗ್ ಮಾಡಲಾಗಿದೆ. ಈ ಆಸ್ತಿಗಳನ್ನು ಒತ್ತುವರಿಯಾಗದಂತೆ ತಡೆಯಲು ಮೂರು ತಿಂಗಳಿಗೊಮ್ಮೆ ಆಸ್ತಿಗಳ ಜಾಗಕ್ಕೆ ಗ್ರಾಮ ಲೆಕ್ಕಾಧಿಕಾರಿಗಳು ಖುದ್ದು ಭೇಟಿ ನೀಡಿ, ಒತ್ತುವರಿಯಾಗದಿರುವುದನ್ನು ದೃಢೀಕರಿಸಿಕೊಂಡು ಜಿಪಿಎಸ್ ಮೂಲಕ ಪ್ರಾಮಾಣಿಕರಿಸಬೇಕು ಎಂದು ತಿಳಿಸಿದರು.


ಶೀಘ್ರ ಬೆಳೆ ಸಮೀಕ್ಷೆ ನಡೆಸಿ, ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಿ: ಜಿಲ್ಲೆಯ ಆರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಹೀಗಾಗಿ ಅಧಿಕಾರಿಗಳು ಮುಂದಿನ ಒಂದು ವಾರದಲ್ಲಿ ಬೆಳೆ ಸಮೀಕ್ಷೆ ನಡೆಸಿ ಸಂಪೂರ್ಣ ಮಾಹಿತಿಯನ್ನು “ಫ್ರೂಟ್ಸ್ ತಂತ್ರಾಂಶ”ದಲ್ಲಿ ನಮೂದಿಸಿದರೆ ಮಾತ್ರ ರೈತರಿಗೆ ಬೆಳೆ ನಷ್ಟ ತುಂಬಿಕೊಡಲು ಸಾಧ್ಯ. ಆ ನಿಟ್ಟಿನಲ್ಲಿ ಅಧಿಕಾರಿಗಳು ಶೀಘ್ರದಲ್ಲಿ ಬೆಳೆ ಸಮೀಕ್ಷೆ ನಡೆಸಿದ ಅಂಕಿ ಅಂಶಗಳನ್ನು ತಂತ್ರಾಂಶದಲ್ಲಿ ನಮೂದಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದರು.
“ರಾಜ್ಯದ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಕೇಂದ್ರ ಅಧ್ಯಯನ ತಂಡವೂ ರಾಜ್ಯಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ.
ಆದರೆ, ತಹಶೀಲ್ದಾರ್, ಗ್ರಾಮ ಲೆಕ್ಕಿಗರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರತಿ ರೈತನ ಬೆಳೆ ಸಮೀಕ್ಷೆ ನಡೆಸಿ ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಬೇಕು. ಆಗ ಮಾತ್ರ ರೈತರಿಗೆ ನ್ಯಾಯಯುತ ಬೆಳೆ ನಷ್ಟ ಪರಿಹಾರ ನೀಡುವುದು ಸಾಧ್ಯ. ಹೀಗಾಗಿ ಅಧಿಕಾರಿಗಳು ತ್ವರಿತಗತಿಯಲ್ಲಿ ಬೆಳೆ ಸಮೀಕ್ಷೆ ನಡೆಸಬೇಕು” ಎಂದು ತಿಳಿಸಿದರು.


ಅಲ್ಲದೆ, “ಬೆಳೆ ನಷ್ಟಕ್ಕೆ ರೈತರಿಗೆ 5 ಎಕರೆವರೆಗೆ ಪರಿಹಾರ ಸಿಗಲಿದೆ. ಒಮ್ಮೆ ಬೆಳೆ ಸಮೀಕ್ಷೆ ಮುಗಿಸಿದ ನಂತರ ಬಿಟ್ಟುಹೋದ ರೈತರ ಹೆಸರನ್ನು ಮತ್ತೆ ಪರಿಹಾರದ ಪಟ್ಟಿಗೆ ಸೇರಿಸುವುದು ಅಸಾಧ್ಯ. ಅಲ್ಲದೆ, ನಗದಿನ ಮೂಲಕವೂ ಪರಿಹಾರ ನೀಡಿಕೆಗೆ ಅವಕಾಶ ಇಲ್ಲ. ಪರಿಹಾರದ ಹಣ ಬ್ಯಾಂಕ್ ಖಾತೆಗೆ ಸಂದಾಯವಾಗಲಿ. ಹೀಗಾಗಿ ಅಧಿಕಾರಿಗಳು ಈಗಲೇ ಬೆಳೆ ಸಮೀಕ್ಷೆಯನ್ನು ಶೇ.100ರಷ್ಟು ದಕ್ಷತೆಯಿಂದ ಮುಗಿಸಬೇಕು. ಬೆಳೆ ಸಮೀಕ್ಷೆಯಿಂದ ಮಾತ್ರ ರೈತರಿಗೆ ಪರಿಹಾರ ನೀಡಲು ಸಾಧ್ಯ” ಎಂದು ಸಚಿವರು ತಾಕೀತು ಮಾಡಿದರು.
ಡಿಸೆಂಬರ್ ಅಂತ್ಯದೊಳಗೆ 263 ಕಂದಾಯ ಗ್ರಾಮ ಘೋಷಣೆ: ಕಂದಾಯ ಇಲಾಖೆಗೆ ಸೇರದ ಕಾರಣ ಕಂದಾಯೇತರ ಜನವಸತಿ ನಿವಾಸಿಗಳು ಅಭಿವೃದ್ಧಿ ಯೋಜನೆಗಳಿಂದ ವಂಚಿತರಾಗುತ್ತಿದ್ದರು, ಹೀಗಾಗಿ ಕರ್ನಾಟಕ ಭೂ ಕಂದಾಯ ಕಾಯಿದೆಗೆ ತಿದ್ದುಪಡಿ ತಂದು ತಾಂಡ-ಗೊಲ್ಲರಹಟ್ಟಿ ಸೇರಿದಂತೆ ಪ್ರದೇಶಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಲು ಅನುವುಮಾಡಿಕೊಡಲಾಗಿತ್ತು. ಚಿತ್ರದುರ್ಗದಲ್ಲೂ 263 ಕಂದಾಯೇತರ ಜನವಸತಿ ಪ್ರದೇಶಗಳ ಪೈಕಿ 151 ಪ್ರದೇಶಗಳನ್ನು ಕಂದಾಯ ಗ್ರಾಮಗಳು ಎಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಉಳಿದ ಗ್ರಾಮಗಳಿಗೆ ಏಕೆ ಅಧಿಸೂಚನೆ ಹೊರಡಿಸಿಲ್ಲ? ಹಲವು ಕಡೆಗಳಲ್ಲಿ ಕಂದಾಯ ಗ್ರಾಮವೇ ಘೋಷಿಸದೆ ಹೇಗೆ ಹಕ್ಕು ಪತ್ರ ನೀಡಿದಿರಿ? ಎಂದು ಪ್ರಶ್ನೆಸಿದ ಸಚಿವರು, ಶೀಘ್ರದಲ್ಲೇ ಅರ್ಹ ಕಂದಾಯೇತರ ಜನವಸತಿ ಪ್ರದೇಶಗಳನ್ನು ಗುರುತಿಸಿ ಕಂದಾಯ ಗ್ರಾಮ ಎಂದು ಅಧಿಸೂಚನೆ ಹೊರಡಿಸಿ. ಬಡವರಿಗೆ ಆದಷ್ಟು ಶೀಘ್ರದಲ್ಲಿ ಹಕ್ಕುಪತ್ರ ವಿತರಿಸಿ” ಎಂದು ಸೂಚಿಸಿದರು.
ಪಿಟಿಸಿಎಲ್ ಕಾಯ್ದೆ ಎಚ್ಚರಿಕೆ ಇರಲಿ: ಬಹುನಿರೀಕ್ಷಿತ ಪಿಟಿಸಿಎಲ್ ಕಾಯ್ದೆಗೆ ಸಂಬಂಧಿಸಿದಂತೆ ಸರ್ಕಾರ ತಿದ್ದುಪಡಿ ವಿಧೇಯಕ ಮಂಡಿಸಿ ಅಂಗೀಕಾರ ಪಡೆದಿದೆ. ಹೀಗಾಗಿ ಪಿಟಿಸಿಎಲ್ ಕಾಯ್ದೆಯ ಅಡಿಯಲ್ಲಿ ಮಂಜೂರಾದ ಭೂಮಿಯನ್ನು ಸರ್ಕಾರದ ಅನುಮತಿ ಇಲ್ಲದೆ ಮಾರಾಟ ಮಾಡುವಂತಿಲ್ಲ.
ಇದರ ಬಗ್ಗೆ ಮಾಹಿತಿ ಇಲ್ಲದ ಕೆಲವು ಅಮಾಯಕರು ಭೂ ಮಾರಾಟಕ್ಕೆ ಮುಂದಾಗಬಹುದು. ಅಥವಾ ಪಿಟಿಸಿಎಲ್ ಭೂಮಿಯನ್ನು ಖರೀದಿ ಮಾಡುವವರೂ ಸಹ ಮೋಸಕ್ಕೊಳಗಾಗುವ ಸಾಧ್ಯತೆ ಇದೆ. ಹೀಗಾಗಿ ಇಂತಹ ಪ್ರಕರಣದ ಬಗ್ಗೆ ಅಧಿಕಾರಿಗಳು ಎಚ್ಚರಿಕೆವಹಿಸಬೇಕು ಎಂದು ಸಚಿವರು ತಾಕೀತು ಮಾಡಿದರು. ಹೊಸದುರ್ಗ ತಾಲೂಕಿನ ನಾಡ ಕಚೇರಿಗೆ ಕಂದಾಯ ಸಚಿವ ಕೃಷ್ಣೇಗೌಡ ದಿಡೀರ್ ಭೇಟಿ ನೀಡಿ ಪರಿಶೀಲನೆ
ನ್ಯಾಯಾಲಯ ಪ್ರಕರಣಗಳ ಅಸಡ್ಡೆ ಬೇಡ: ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ 20,000 ಪ್ರಕರಣಗಳಿವೆ. ಆದರೆ, ಈ ಪೈಕಿ 15,000 ಪ್ರಕರಣಗಳಲ್ಲಿ ತೆಗೆದುಕೊಂಡಿರು ಕ್ರಮ ಶೂನ್ಯ. ಅಲ್ಲದೆ, ನ್ಯಾಯಾಲಯದಲ್ಲಿ ವಕಾಲತ್ತನ್ನೂ ಸಹ ಸಲ್ಲಿಸುವ ಕೆಲಸವನ್ನು ನಮ್ಮ ಅಧಿಕಾರಿಗಳು ಮಾಡಿಲ್ಲ. ಹೀಗಾಗಿ ನ್ಯಾಯಾಲಯ ಇಲಾಖೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ಹೊರಹಾಕಿದರು.
ಈ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, “ಚಿತ್ರದುರ್ಗದಲ್ಲೂ ಸಹ ಹೈಕೋರ್ಟ್‍ನಲ್ಲಿರುವ 359 ಪ್ರಕರಣಗಳ ಪೈಕಿ 302 ಪ್ರಕರಣಗಳಲ್ಲಿ ತಹಶೀಲ್ದಾರರು ಹಾಗೂ ಉಪವಿಭಾಗಾಧಿಕಾರಿ ತೆಗೆದುಕೊಂಡಿರುವ ಕ್ರಮ ಶೂನ್ಯವಾಗಿರುವುದು ಏಕೆ? ಈ ಪ್ರಕರಣಗಳಲ್ಲಿ ಏಕಿನ್ನು ವಕಾಲತ್ತನ್ನೂ ಸಲ್ಲಿಸಿಲ್ಲ? ಎಂದು ಪ್ರಶ್ನಿಸಿದರು.
ನೀವು ಮಾಡುವ ಕೆಲಸಕ್ಕೆ ಸರ್ಕಾರದ ಜಮೀನು ಖಾಸಗಿಯವರ ಪಾಲಾಗಲು ನಾವು ಸಹಿ ಹಾಕಬೇಕಾ ಎಂದ ಸಚಿವರು, ಈ ಸಮಸ್ಯೆಯನ್ನು ಶೀಘ್ರ ಪರಿಹರಿಸಿ ಪ್ರತಿ 15 ದಿನಗಳಿಗೊಮ್ಮೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಿದರು.
ತಕರಾರು ಅರ್ಜಿ ತ್ವರಿತ ವಿಲೇಗೆ ಸೂಚನೆ: ಜಿಲ್ಲೆಯಾದ್ಯಂತ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಾಳ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ತಕರಾರು ಪ್ರಕರಣಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದಂತೆ ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ಬಾಕಿ ಇರುವ ಅರ್ಜಿಗಳನ್ನು ಅಧಿಕಾರಿಗಳು ತ್ವರಿತವಾಗಿ ವಿಲೇವಾರಿ ಮಾಡಿರುವುದು ನಿಜಕ್ಕೂ ಶ್ಲಾಘನೀಯ” ಎಂದು ಮೆಚ್ಚುಗೆ ಸೂಚಿಸಿದರು.
ಆದರೆ, ಉಪವಿಭಾಗಾಧಿಕಾರಿ ನ್ಯಾಯಾಲಯಗಳಲ್ಲಿ 1497 ಪ್ರಕರಣಗಳು ಬಾಕಿ ಇರುವುದು ಏಕೆ? ಎಂದು ಪ್ರಶ್ನಿಸಿದರು. ಅಲ್ಲದೆ, ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರುದಾರರಿಗೆ ನೋಟೀಸ್ ನೀಡಿ ತ್ವರಿತ ವಿಚಾರಣೆ ನಡೆಸಿ ಆದಷ್ಟು ಶೀಘ್ರದಲ್ಲಿ ಈ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಎಂದು ಅವರು ತಿಳಿಸಿದರು.
ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ಆಡಳಿತಕ್ಕೆ ಚುರುಕು: ಚಿತ್ರದುರ್ಗ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಸಚಿವ ಕೃಷ್ಣ ಬೈರೇಗೌಡ ಅವರು ಕಂದಾಯ ಇಲಾಖೆ ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಆಡಳಿತಕ್ಕೆ ಚುರುಕು ನೀಡಿದರು.

ಮಾಡದಕೆರೆ ನಾಡಕಚೇರಿಗೆ ಭೇಟಿ ನೀಡಿದ ಸಚಿವರು ಅಧಿಕಾರಿಗಳಿಂದ ಹಲವು ಮಾಹಿತಿಗಳನ್ನು ಪಡೆದರು. ಅಲ್ಲದೆ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ನಂತರ ಹೊಸದುರ್ಗ ತಾಲೂಕು ಕಚೇರಿಗೆ ತೆರಳಿದ ಅವರು, ರೆಕಾರ್ಡ್ ರೂಂ ಪರಿಶೀಲನೆ ವೇಳೆ 100 ವರ್ಷದ ಹಳೆಯ ಕಡತಗಳು ದೂಳು ಹಿಡಿದಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಶೀಘ್ರದಲ್ಲೇ ಎಲ್ಲಾ ಕಡತಗಳನ್ನೂ ಸ್ಕ್ಯಾನ್ ಮಾಡಿ ಡಿಜಿಟಲೀಕರಣಗೊಳಿಸುವ ಮೂಲಕ ಸಾರ್ವಜನಿಕರಿಗೆ ಈ ದಾಖಲೆಗಳು ಲಭ್ಯವಾಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಸಚಿವರು ಹೊಸದುರ್ಗದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧ ಕಟ್ಟಡಕ್ಕೂ ಭೇಟಿ ನೀಡಿ ಪರಿಶೀಲಿಸಿದರು.
ಇ-ಆಫೀಸ್ ಬಳಸಿ: ಸಭೆಯ ವೇಳೆ ಈ ಆಫೀಸ್ ಬಳಕೆಯ ಬಗ್ಗೆಯೂ ಚರ್ಚೆ ನಡೆಸಿದ ಸಚಿವರು, “ಪ್ರಗತಿ ಪರಿಶೀಲನಾ ಪುಸ್ತಕದಲ್ಲಿ ಎಲ್ಲಾ ತಾಲೂಕುಗಳಲ್ಲೂ ಇ-ಆಫೀಸ್ ಜಾರಿಯಾಗಿದೆ ಎಂದು ನಮೂದಿಸಲಾಗಿದೆ. ಆದರೆ, ವಾಸ್ತವದಲ್ಲಿ ಯಾವ ತಾಲೂಕಿನಲ್ಲೂ ಅಧಿಕಾರಿಗಳು ಇ-ಆಫೀಸ್ ಬಳಸುತ್ತಿಲ್ಲ ಎಂಬುದು ಖುದ್ದು ಪರಿಶೀಲನೆಯಿಂದ ತಿಳಿಯುತ್ತದೆ.
ಟಪಾಲು ವಿಭಾಗದಲ್ಲೇ ಇ-ಆಫೀಸ್ ಬಳಸಿದರೆ ಯಾವ ಕಡತವೂ ಕಳುವಾಗಲ್ಲ. ಅಲ್ಲದೆ, ಎಲ್ಲರಿಗೂ ತ್ವರಿತವಾಗಿ ನ್ಯಾಯಸಮ್ಮತ ಪರಿಹಾರವೂ ಲಭ್ಯವಾಗುತ್ತದೆ. ಸರ್ಕಾರ ಪ್ರಚಾರಕ್ಕಾಗಿ ಇ-ಆಫೀಸ್ ಜಾರಿಗೆ ತಂದಿಲ್ಲ. ಬದಲಾಗಿ ಜನರ ಕೆಲಸ ಆಗಲಿ ಎಂಬ ಕಾರಣಕ್ಕೆ ಜಾರಿಗೆ ತರಲಾಗಿದೆ. ಹೀಗಾಗಿ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಇ-ಆಫೀಸ್ ಬಳಸಬೇಕು. ಜಿಲ್ಲಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಬೇಕು” ಎಂದು ತಾಕೀತು ಮಾಡಿದರು.
ಬರ ಪರಿಸ್ಥಿತಿ ಘೋಷಣೆಯಾಗಿರುವುದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಮೇವು ಸಂಗ್ರಹಣೆಗಾಗಿ ಕೂಡಲೇ ಸಿದ್ದತೆ ಮಾಡಿಕೊಳ್ಳಬೇಕು .ಪಶು ಸಂಗೋಪನೆ ಇಲಾಖೆಯಿಂದ ಮೇವು ಬೀಜಗಳ ವಿತರಣೆಗೆ ಕ್ರಮಕೈಗೊಳ್ಳಲಾಗಿದ್ದು, ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯವಿರುವ ಹಾಗೂ ಮೇವು ಬೆಳೆಯಲು ಆಸಕ್ತ ಇರುವ ರೈತರನ್ನು ಗುರುತಿಸಿ, ಮೇವು ಬೀಜಗಳ ವಿತರಣೆಗೆ ಕ್ರಮಕೈಗೊಳ್ಳಬೇಕು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೊರದಂತೆ ಮುಂಜಾಗ್ರತೆ ಕ್ರಮವಾಗಿ ಖಾಸಗಿ ಬೋರ್‍ವೆಲ್‍ಗಳನ್ನು ಗುರುತಿಸಿ ಪಟ್ಟಿ ಮಾಡಿ. ಈಗಾಗಲೇ ಎಲ್ಲಾ ಜಿಲ್ಲೆಗಳಿಗೆ ಕುಡಿಯುವ ನೀರು ಉದ್ದೇಶಕ್ಕಾಗಿಯೇ ತಲಾ ರೂ.1 ಕೋಟಿ ಒದಗಿಸಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಮಾತನಾಡಿ, ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಸೂಚಿಸಿರುವ ವಿಷಯಗಳನ್ನು ಕೆಡಿಪಿ ಸಭೆಗಳಲ್ಲಿ ಪ್ರಗತಿ ಪರಿಶೀಲನೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕರಾದ ಬಿ.ಜಿ.ಗೋವಿಂದಪ್ಪ, ಡಾ.ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ಕೆ.ಸಿ. ವೀರೇಂದ್ರ ಪಪ್ಪಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಕಂದಾಯ ಇಲಾಖೆ ಆಯುಕ್ತ ಸುನೀಲ್ ಕುಮಾರ್, ಸರ್ವೆ ಇಲಾಖೆ ಆಯುಕ್ತ ಮಂಜುನಾಥ್ ಹಾಗೂ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಕರ್ನಾಟಕ ಲ್ಯಾಂಡ್ ಕಾರ್ಪೋರೇಷನ್ ವ್ಯವಸ್ಥಾಪಕ ನಿರ್ದೇಶಕ ವಸಂತ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *