ಇತರೆ-ವಿಶ್ಲೇಷಣೆ

ಸಮಗ್ರ ಭಾಷಾ ಅಭಿವೃದ್ಧಿಗೆ ಶೀಘ್ರ ಕಾನೂನು ಸ್ವರೂಪ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹಾವೇರಿ : ಸಮಗ್ರ ಭಾಷಾ ಅಭಿವೃದ್ಧಿಗೆ ಕಾನೂನಿನ ಸ್ವರೂಪ ನೀಡಿ, ಕನ್ನಡಿಗರಿಗೆ ಕೈಗಾರಿಗಳ ಉದ್ಯೋಗದಲ್ಲಿ ಶೇ.80 ರಷ್ಟು ಪ್ರಾಶಸ್ತ್ಯ ನೀಡಲಾಗುವುದು‌.ಗಡಿ ಭಾಗದ ಹಾಗೂ ಗಡಿ ಆಚೆಗಿನ ಕನ್ನಡಿಗರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ಗಡಿ ಅಭಿವೃದ್ಧಿಗೆ ವಿಶೇಷ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಅತ್ಯಂತ ಪ್ರಾಚೀನ ಭಾಷೆ. ಕನ್ನಡಿಗರ ಬದುಕು. ಪುರಾತನ, ಪ್ರಾಚನ, ಶ್ರೇಷ್ಠವಾದುದು. ಇಡೀ ಜಗತ್ತಿನಲ್ಲಿ ಕನ್ನಡದ ಸಂಸ್ಕೃತಿ ಅತ್ಯಂತ ಶ್ರೇಷ್ಠ ಮತ್ತು ಪರಂಪರೆ ಹಾಗೂ ಚರಿತ್ರೆ ಇರುವಂಥದ್ದು. ಕನ್ನಡದ ಸಂಸ್ಕೃತಿಗೆ ದೊಡ್ಡ ಶಕ್ತಿ, ಅರ್ಥ, ಭಾವನೆಗಳನ್ನು ತುಂಬಿ ಹಾಗೂ ಬದುಕನ್ನು ಕೊಟ್ಟಿರುವುದು ಕನ್ನಡದ ಸಾಹಿತ್ಯ ಲೋಕ. ಕನ್ನಡದ ಸಂಸ್ಕೃತಿಯಲ್ಲಿ ಸಾಹಿತ್ಯದ ಪಾತ್ರ ದೊಡ್ಡದಿದ್ದು ಇದನ್ನು ಗುರುತಿಸಿ ಬೆಳೆಸಿಕೊಂಡು ಹೋಗಬೇಕಾದ್ದು ಈ ಸಮ್ಮೇಳನಗಳ ಉದ್ದೇಶ. ಕನ್ನಡದ ಕಿಚ್ಚನ್ನು ಮತ್ತೊಮ್ಮೆ ಹಚ್ಚಿ, ಕನ್ನಡ ಕಂಪನ್ನು ಎಲ್ಲೆಡೆ ಪಸರಿಸಬೇಕು. ಕನ್ನಡವನ್ನು ಆಳವಾಗಿ ಭಾರತದಲ್ಲಿ ಬಿತ್ತಬೇಕು. ಅದು ಬೆಳೆದು ಹೆಮ್ಮರವಾಗಿ ಬೆಳೆಯಬೇಕು. ಈ ಉದ್ದೇಶಗಳಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ ಎಂದರು.

ದೊಡ್ಡರಂಗೇಗೌಡರದ್ದು ದೊಡ್ಡ ಸಾಧನೆ :

ತಮ್ಮ ಹೆಸರಿನಂತೆಯೇ ಸಾಹಿತ್ಯ, ಸಾಂಸ್ಕೃತಿಕ ರಂಗಗಳಲ್ಲಿ ದೊಡ್ಡ ಸಾಧನೆ ಮಾಡಿರುವ ಪ್ರೊ.ದೊಡ್ಡರಂಗೇಗೌಡರು ತಮ್ಮ ಹೆಸರಿಗೆ ಅನ್ವರ್ಥವಾಗುವಂತಹ ವ್ಯಕ್ತಿತ್ವ ಹೊಂದಿದ್ದಾರೆ. ಅವರೊಬ್ಬ ಪರಿಪೂರ್ಣ ಸಾಹಿತಿ. ಮಾನವೀಯತೆಯ ಸೂಕ್ಷ್ಮತೆಗಳನ್ನು ಅರ್ಥ ಮಾಡಿಕೊಂಡು ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಮಾರ್ಮಿಕವಾಗಿ ತಿಳಿಸುವ ಕೆಲಸವನ್ನು ಅವರ ಸಾಹಿತ್ಯ, ಕವಿತೆಗಳಲ್ಲಿ, ಹಾಡುಗಳಲ್ಲಿ ಕಂಡುಬರುತ್ತದೆ. ಸಾಹಿತ್ಯ, ಸಿನಿಮಾ ಮತ್ತು ಇತರ ರಂಗದಲ್ಲಿಯೂ ಖ್ಯಾತಿ ಪಡೆದು ದೊಡ್ಡ ಹೃದಯ ಹೊಂದಿದವರು ಎಂದರು.

ಕನ್ನಡದ ತೇರು :

ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾಗಿರುವ ಡಾ.ಹೆಚ್.ಎಸ್.ವೆಂಕಟೇಶಮೂರ್ತಿಯವರೂ ಕೂಡ ಸಂವೇದನಾಶೀಲ ಕಾವ್ಯದ ಕರ್ತೃವಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಕನ್ನಡ ತೇರನ್ನು ಎಳೆದು ಹಾವೇರಿಗೆ ಕೊಟ್ಟು, ಹಾವೇರಿಯಿಂದ ದೊಡ್ಡರಂಗೇಗೌಡರು ರಾಜ್ಯದಲ್ಲಿ ಈ ತೇರನ್ನು ಕೊಂಡೊಯ್ಯಲಿದ್ದಾರೆ ಎಂದರು.

ಕನ್ನಡವನ್ನು ಕಟ್ಟಲು ಆತ್ಮಸಂಕಲ್ಪ :

ಒಂದು ಭಾಷೆ , ಸಂಸ್ಕೃತಿ ಬೆಳೆಯಬೇಕಾದರೆ ನಡೆದು ಬಂದ ದಾರಿಯನ್ನು ಸಿಂಹಾವಲೋಕನ ಮಾಡಬೇಕು. ಇದರಲ್ಲಿ ನಮ್ಮ ಪಾತ್ರದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ಮುಂದಿನ ಭವಿಷ್ಯವನ್ನು ನಿರ್ಮಿಸಲಬೇಕು. ಕನ್ನಡದ ಪರಂಪರೆ ಅತ್ಯಂತ ಶ್ರೀಮಂತ ಪರಂಪರೆ. ಹಾಗೂ ಕನ್ನಡ ಭಾಷೆ ಎಂದಿಗೂ ಬಡವಾಗಿಲ್ಲ. ಶತ ಶತ ಮಾನಗಳವರೆಗೆ, ಸೂರ್ಯ ಚಂದ್ರರು ಇರುವವರೆಗೂ ಕನ್ನಡ ಶ್ರೀಮಂತವಾಗಿ ಬೆಳೆಯುತ್ತಲೇ ಸಾಗುತ್ತದೆ. ಕನ್ನಡಕ್ಕೆ ಆಪತ್ತು ತರುವ ಯಾವುದೇ ಶಕ್ತಿ ಹುಟ್ಟಿಲ್ಲ. ಹುಟ್ಟುವುದೂ ಇಲ್ಲ. ಆದ್ದರಿಂದ ಆತ್ಮವಿಶ್ವಾದಿಂದ, ಆತ್ಮಸಂಕಲ್ಪದಿಂದ ಕನ್ನಡವನ್ನು ಕಟ್ಟಿ ಬೆಳೆಸೋಣ. ಬೆಳವಣಿಗೆಯಲ್ಲಿ ನಮ್ಮದೂ ಕೊಡುಗೆ ಇರಲಿ ಎಂಬ ಭಾವನೆಯಿಂದ ಸಮ್ಮೇಳನವನ್ನು ಪ್ರಾರಂಭ ಮಾಡಬೇಕಿದೆ. ಆದಿ ಕವಿ ರನ್ನ ಪಂಪರಿಂದ ಹಿಡಿದು ಡಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದವರು ಕನ್ನಡಿಗರು. ದೇಶದ ಯಾವುದೇ ರಾಜ್ಯದಲ್ಲಿ ಎಂಟು ಜನ ಜ್ಞಾನಪೀಠ ಪ್ರಶಸ್ತಿ ಪಡೆದ ಉದಾಹರಣೆ ಇಲ್ಲ. ಕನ್ನಡದ ಸಾಹಿತ್ಯದ ತ್ಮಶಕ್ತಿಯನ್ನು ತೋರಿಸುತ್ತದೆ. ಎರಡು ಸರಸ್ವತಿ ಸಮ್ಮಾನ್ ಪ್ರಶಸ್ತಿಗಳು ಕನ್ನಡಕ್ಕೆ ಲಭ್ಯವಾಗಿದೆ ಎಂದರು.

ವಿಭಿನ್ನತೆಯಲ್ಲಿ ಏಕತೆ :

ಕನ್ನಡದ ಶ್ರೀಮಂತ ಲೋಕಕ್ಕೆ ಅಂತ:ಸತ್ವ ಮತ್ತು ಆಧ್ಯಾತ್ಮಿಕ ಬದುಕಿನ ದಾರಿಯನ್ನು ಹಾಗೂ ಕನ್ನಡದವನ್ನೂ ಶ್ರೀಮಂತ ಮಾಡಿರುವುದು ವಚನ ಮತ್ತು ದಾಸ ಸಾಹಿತ್ಯ ಪ್ರಕಾರಗಳು. ಇವೆರಡೂ ಕನ್ನಡದ ಅಂತಃಸತ್ವ ಗಟ್ಟಿಗೊಳಿಸಿವೆ. ಇವೆಲ್ಲವನ್ನೂ ನಮ್ಮ ದಿನನಿತ್ಯದ ಬದುಕಿನಲ್ಲ ಅನುಭವಿಸುತ್ತಿದ್ದೇವೆ. ಕನ್ನಡಿಗರ ಭಾಷೆ ವಿಭಿನ್ನತೆಯಲ್ಲಿ ಏಕತೆ ಇದೆ. ನಡುನಾಡ ಕನ್ನಡ, ಗಡಿನಾಡು ಕನ್ನಡ, ತ್ತರ, ದಕ್ಷಿಣ ಕರ್ನಾಟಕ, ಕರಾವಳಿ, ಕಲ್ಯಾಣ ಕರ್ನಾಟಕದ ಕನ್ನಡ ಎಲ್ಲದರಲ್ಲಿಯೂ ಭಾಷೆಯ ಸೊಗಡು ಅಲ್ಲಿನ ಬದುಕಿನ ಜೊತೆಗೆ ಹಾಸುಹೊಕ್ಕಾಗಿ ಬೆಳೆಯುತ್ತಿದೆ. ಕನ್ನಡದ ವಿಭಿನ್ನ ಆಯಾಮಗಳೂ ಮೂಲ ಕನ್ನಡದ ಜೊತೆಗೆ ಬೆಳೆಯುತ್ತಿರುವುದು ಹೆಮ್ಮೆಯ ವಿಚಾರ. ಕನ್ನಡ ಭಾಷೆಗೆ ದೊಡ್ಡ ಪರಂಪರೆಯಿದೆ. ಕನ್ನಡದ ಹೃದಯಗಳು ಒಂದಾಗಲು ಅವಕಾಶ ದೊರೆತಿದ್ದು ಕರ್ನಾಟಕ ಏಕೀಕರಣದ ಹೋರಾಟದ ಮೂಲಕ ಕರ್ನಾಟಕ ರಾಜ್ಯ ಸ್ಥಾಪನೆಯಾದಾಗ. ನಮ್ಮದೇ ನಾಡು, ರಾಜ್ಯ ದೊರಕಿಸಿಕೊಳ್ಳಲು ಸಾಧ್ಯವಾಯಿತು. ಕರ್ನಾಟಕ ಏಕೀಕರಣ ಚಳುವಳಿಗೆ ಹಳೆಯ ಮೈಸೂರು ಭಾಗದ ಜನರೂ ಕೈಜೋಡಿಸಿದ ಪರಿಣಾಮವಾಗಿ ಕನ್ನಡ ಭಾಷಿಕರೆಲ್ಲ ಒಂದು ಆಡಳಿತದ ತೆಕ್ಕೆಗೆ ಒಳಪಡಲು ಸಾಧ್ಯವಾಯಿತು ಎಂದರು.

ಏಕೀಕರಣ ಹೋರಾಟ :

ಉತ್ತರ ಕರ್ನಾಟಕ ಎಲ್ಲಾ ಮುಖಂಡರು ಹೋರಾಟ ಮಾಡಿದಾಗ, ಕುವೆಂಪು ಮತ್ತೆಲ್ಲರೂ ಸೇರಿ ಕನ್ನಡವನ್ನು ಒಂದು ಮಾಡಿದ್ದಾರೆ. ಹಾವೇರಿಯ ಸಿದ್ದಪ್ಪ ಹೊಸಮನಿ, ಅಂಗಾರಪ್ಪ ದೊಡ್ಡಮೇಟಿ, ಗುದ್ಲೆಪ್ಪ ಹಳ್ಳಿಕೇರಿ, ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ, ಇವರೆಲ್ಲರೂ ಏಕೀಕರಣ ಹೋರಾಟದ ಮುಂಚೂಣಿಯಲ್ಲಿದ್ದವರು. ಇವರೆಲ್ಲರ ಹೋರಾಟದ ಪರಿಣಾಮವಾಗಿ ಇಂದು ಕನ್ನಡ ಭಾಷೆ, ಕನ್ನಡ ಒಂದಾಗಿದೆ. ಈ ಹೋರಾಟ ಸ್ವತಂತ್ರ ಹೋರಾಟದಿಂದ ಬಂದದ್ದು. ಹಾವೇರಿಯ ಮೈಲಾರ ಮಹದೇವಪ್ಪನವರ ಹೋರಾಟ, ತ್ಯಾಗ, ಬಲಿದಾನ ಎಂದೂ ಮರೆಯಲು ಸಾದ್ಯವಿಲ್ಲ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಕರ್ನಾಟಕ ಎಂದು ನಾಮಕರಣ ಮಾಡಿ ಕನ್ನಡಿಗರ ಭಾವನೆಯನ್ನು ಒಗ್ಗೂಡಿಸಿದ್ದಾರೆ. ಎಲ್ಲಾ ಭಾವನೆಗಳಲ್ಲು ನಮ್ಮ ಒಡಲಾಳದಲ್ಲಿ ಇರಿಸಿಕೊಂಡು ಮುಂದುವರೆಯುತ್ತಿದ್ದೇವೆ ಎಂದರು.

ನೀರಾವರಿ ದಶಕ :
ಕನ್ನಡ ನಾಡು ಸಂಪದ್ಭರಿತವಾಗಿದೆ. 10 ಕೃಷಿ ವಲಯಗಳು ನಮ್ಮ ನಾಡಿನಲ್ಲಿವೆ, ವರ್ಷದ ಎಲ್ಲಾ ದಿನಗಳಲ್ಲಿಯೂ ಈ ನಾಡಿನಲ್ಲಿ ಒಂದಲ್ಲ ಒಂದು ಬೆಳೆ, ಫಸಲು ಸದಾ ಹಸಿರು ಉಕ್ಕಿಸುತ್ತಿರುತ್ತದೆ. ದುಡಿಯುವ ವರ್ಗ, ರೈತರು, ಕೂಲಿಕಾರರು ಈ ನಾಡನ್ನು ಕಟ್ಟಿದ್ದಾರೆ. ಕಳೆದ ಐದು ವರ್ಷಗಳಲ್ಲಿ 1.5 ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಮುಂದಿನ ಒಂದು ದಶಕ ನೀರಾವರಿ ದಶಕವಾಗಿರುತ್ತದೆ. ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುವ ಬದ್ಧತೆ ನಮ್ಮದಾಗಿದೆ. ಆಹಾರ ಉತ್ಪಾದನೆ ನಮ್ಮ ಸ್ವಾಭಿಮಾನದ ಸಂಪತ್ತು. ದುಡಿಯುವ ವರ್ಗ ರಾಜ್ಯವನ್ನು ಕಟ್ಟುತ್ತಿದೆ. ನಾಡು ಕಟ್ಟುವ ರೈತರಿಗೆ, ಕೂಲಿಕಾರ್ಮಿಕರಿಗೆ, ಕುಶಲಕರ್ಮಿಗಳಿಗೆ ಅಭಿನಂದನೆಗಳು ಎಂದರು.

ದಾರಿದೀಪವಾಗಿರುವ ದಾರ್ಶನಿಕರ ವಚನಗಳು :

ಹಾವೇರಿ ಜಿಲ್ಲೆಯ ದಾರ್ಶನಿಕರಾದ ಸರ್ವಜ್ಞನ ವಚನಗಳು ಇಂದಿಗೂ ದಾರಿದೀಪವಾಗಿದೆ. ಕನಕದಾಸರು, ಸಂತಶಿಶುನಾಳ ಶರೀಫರು ಧರ್ಮದ ಚೌಕಟ್ಟನ್ನು ಮೀರಿ ಬದುಕಿಗೆ ಅಧ್ಯಾತ್ಮವನ್ನು ತಂದಿರುವ ಸಂತ. ಪಂಚಾಕ್ಷರಿ ಗವಾಯಿಗಳು, ಹಾನಗಲ್ ಕುಮಾರಸ್ವಾಮಿ, ಗಳಗನಾಥರು, ವಿ.ಕೃ.ಗೋಕಾರರು ಕರ್ನಾಟಕಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಪಾಟೀಲ ಪುಟ್ಟಪ್ಪನವರು, ಚಂದ್ರಶೇಖರ ಪಾಟೀಲರ ಕೊಡುಗೆ ಅಪಾರವಾಗಿದೆ ಎಂದರು.

ಕನ್ನಡಿಗರ ಕೈಗಳಿಗೆ ಕೆಲಸ ನೀಡುವ ಉದ್ಯೋಗ ನೀತಿ :

ಕನ್ನಡ ಭಾಷೆಗೆ ಹತ್ತು ಎಲ್ಲ ಕ್ಷೇತ್ರಗಳಲ್ಲಿ ಕನ್ನಡವನ್ನು ಉಳಿಸಬೇಕು, ಬೆಳೆಸಬೇಕು ಎಂಬ ಆಶಯದಿಂದ ಸಮಗ್ರವಾದ ಕಾನೂನನ್ನು ರೂಪಿಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆದೇಶದಂತೆ ಈಗಲೇ ರಾಜ್ಯದ ಕಾನೂನು ಆಯೋಗವು ಕರಡು ಸಿದ್ಧಪಡಿಸಿದೆ.ಇನ್ನಷ್ಟು ವಿಸ್ತೃತ ಮತ್ತು ವ್ಯಾಪಕ ಚರ್ಚೆಗಳಾದ ಕೂಡಲೇ ಈ ಕಾನೂನು ಜಾರಿಗೊಳ್ಳುತ್ತದೆ. ಕೈಗಾರಿಕೆಗಳ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.80 ರಷ್ಟು ಪ್ರಾಶಸ್ತ್ಯ ದೊರೆತು ಎಲ್ಲ ಕನ್ನಡಿಗರ ಕೈಗಳಿಗೆ ಕೆಲಸ ನೀಡುವ ಉದ್ಯೋಗ ನೀತಿಯ ತೀರ್ಮಾನವನ್ನು ರಾಜ್ಯದ ಸಚಿವ ಸಂಪುಟದಲ್ಲಿ ಕೈಗೊಳ್ಳಲಾಗುವುದು ಎಂದರು.

ಗಡಿಭಾಗದ ಹಾಗೂ ಗಡಿಯಾಚೆಗಿನ ಕ‌ನ್ನಡಿಗರ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ :

ಗಡಿಭಾಗದ ಹಾಗೂ ಗಡಿಯಾಚೆಗಿನ ಕ‌ನ್ನಡಿಗರ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ.ಅದಕ್ಕಾಗಿ ವಿಶೇಷ ಅನುದಾನ‌ ನೀಡಲಾಗುವುದು. ಮೂಲಭೂತಸೌಕರ್ಯ ಸೇರಿದಂತೆ ಗಡಿಭಾಗಗಳ ಸಂಪೂರ್ಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಗಡಿಭಾಗದ ಕನ್ನಡಿಗರ ಸಮಸ್ಯೆಗಳನ್ನು ನಿವಾರಿಸುವಂತಹ, ಶಾಲೆಗಳನ್ನು ಉಳಿಸುವಂತಹ ಕೆಲಸವನ್ನು ಮಾಡಲಾಗುತ್ತದೆ ಎಂದರು.

ಕನ್ನಡಿಗರ ಬದುಕನ್ನು ಕಟ್ಟಿಕೊಡುವಂತಹ ವೇದಿಕೆ :

ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಳ್ಳಲಾಗುವ ನಿರ್ಣಯ ಹಾಗೂ ನಿಲುವುಗಳನ್ನು ಸರ್ಕಾರ ಚಾಚೂತಪ್ಪದೇ ಪಾಲಿಸುತ್ತದೆ. ಕನ್ನಡ ಸಾಹಿತ್ಯ ಮತ್ತು ಭಾಷೆಯ ಭವಿಷ್ಯವನ್ನು ಬರೆಯುವಂತಹ , ಕನ್ನಡಿಗರ ಬದುಕನ್ನು ಕಟ್ಟಿಕೊಡುವಂತಹ ವೇದಿಕೆಯಾಗಲಿ. ನವಕರ್ನಾಟಕ ನಿರ್ಮಾಣಕ್ಕೆ ಸಾಹಿತ್ಯ ಸಮ್ಮೇಳನ ಕೊಡುಗೆಯನ್ನು ನೀಡಲಿ. ತಾವೊಬ್ಬ ಕನ್ನಡದ ನಿಯತ್ತಿನ ಸೇವಕ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಹೆಮ್ಮೆಯಿಂದ ತಿಳಿಸಿದರು.

ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇಗೌಡ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ.ಸುನೀಲಕುಮಾರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರೆಬೈಲ್ ಶಿವರಾಮ ಹೆಬ್ಬಾರ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಅರುಣ ಪೂಜಾರ, ವಿರೂಪಾಕ್ಷಪ್ಪ ಬಳ್ಳಾರಿ, ಶ್ರೀನಿವಾಸ ಮಾನೆ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ, ಸಲೀಂ ಅಹ್ಮದ್, ಆರ್.ಶಂಕರ್, ಪ್ರದೀಪ ಶೆಟ್ಟರ್ , ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ,ವಾಕರಸಾಸಂ ಉಪಾಧ್ಯಕ್ಷ ಬಸವರಾಜ ಕೆಲಗಾರ, ಮಾಜಿ ಸಚಿವರಾದ ಬಸವರಾಜ ಶಿವಣ್ಣವರ, ಮನೋಹರ ತಹಶೀಲ್ದಾರ್, ರುದ್ರಪ್ಪ ಲಮಾಣಿ ಮತ್ತಿತರರು ವೇದಿಕೆಯಲ್ಲಿದ್ದರು.

ಸ್ವಾಗತ ಸಮಿತಿ ಅಧ್ಯಕ್ಷ , ಶಾಸಕ ನೆಹರು ಓಲೇಕಾರ ಸ್ವಾಗತಿಸಿದರು, ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಆಶಯ ಮಾತುಗಳನ್ನಾಡಿದರು.

ನರರಾಕ್ಷಸನ‌ ವಿಕೃತ ಅಟ್ಟಹಾಸ……

” ನರರಾಕ್ಷಸನ‌ ವಿಕೃತ ಅಟ್ಟಹಾಸ………
****************************************
ನಾವು‌ ಚಿಕ್ಕವರಿದ್ದಾಗ ದೆವ್ವ, ಪಿಶಾಚಿ, ರಾಕ್ಷಸರೆಂದರೆ‌ ಮನುಷ್ಯರಿಗೆ ತದ್ವಿರುದ್ಧವಾದ ಅತಿ ಭಯಂಕರ ರೂಪ ಹೊಂದಿರುವ, ನೋಡಿದರೆ ಬೆಚ್ಚಿ‌ಬೀಳುವ ಕ್ಷುದ್ರ ಆಕೃತಿಗಳು ಎಂಬ ವಿಶೇಷ ಕಲ್ಪನೆಯಿತ್ತು. ಕಥೆ, ಸಿನಿಮಾ‌, ಡ್ರಾಮಾ, ಫ಼್ಯಾಂಟಸಿ ಕಥಾನಕಗಳಲ್ಲೂ ದೆವ್ವ ಪಿಶಾಚಿಗಳೆಂದರೆ ಒಂದು ರೀತಿಯ ಭಯಾನಕ ಚಿತ್ರಣವೇ‌ ಕಣ್ಣಮುಂದೆ ಇತ್ತು. ಆದರೆ ಸ್ವತಃ ದೆವ್ವ- ಭೂತಗಳೂ ಹೆದರಿಕೊಳ್ಳು ವಂತಹಾ, ಕಾಡು ಪ್ರಾಣಿಗಳೂ ನಾಚಿಕೆ ಪಟ್ಟುಕೊಳ್ಳುವಂತಹ, ವಿಷಜಂತುಗಳೂ ಬೆಚ್ಚಿ ಬೀಳುವ ಭಯಂಕರ ಕೃತ್ಯಗಳನ್ನು ಈ ನರ ಮನುಷ್ಯ ಎಂಬ ವಿಚಿತ್ರ ಪ್ರಾಣಿ ಮಾಡಬಲ್ಲ ಎಂಬುದು ಎಂದೋ ಸಾಬೀತಾಗಿದೆ, ಆಗುತ್ತಲಿದೆ ಹಾಗೂ ಆಗಲಿದೆ.

ಆ ಸಾಲಿಗೆ‌ ಇಲ್ಲೊಬ್ಬ ನರರಾಕ್ಷಸನ‌ ಹೇಯ‌ ಕೃತ್ಯ ಸೇರ್ಪಡೆ ಯಾಗಿದೆ. ಹಾಗೇ ಗಮನಿಸಿ.

ತನ್ನೊಡನೆ ಮದುವೆಯಾಗದೇ ಒಟ್ಟಿಗೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಗೆಳತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಅವಳ ದೇಹವನ್ನು ಬರೋಬ್ಬರಿ 35 ತುಂಡುಗಳನ್ನಾಗಿಸಿ, ದೆಹಲಿಯ ಬೇರೆ ಬೇರೆ ಪ್ರದೇಶಗಳಲ್ಲಿ ಆಕೆಯ‌ ದೇಹದ ಭಾಗಗಳನ್ನು ಸರಿ ರಾತ್ರಿಯಲ್ಲಿ ಹೂತು ಹಾಕಿರುವ ಭೀಭತ್ಸಕರ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಈ ಅಮಾನುಷ ಕೃತ್ಯ ಎಸಗಿದ 5 ತಿಂಗಳ ಬಳಿಕ ನರರಕ್ಕಸ ಕೊಲೆಗಡುಕನನ್ನು ಪೊಲೀಸರು ಬಂಧಿಸಿದ್ದಾರೆ. ಇದು ಮೊನ್ನೆ ಸುದ್ದಿಯಾಗಿದೆ.

ಇದರ ಹಿನ್ನೆಲೆ‌ ಕೆದಕಿದಾಗ ಸಿಕ್ಕಿದ್ದಿಷ್ಟು !

ಕೊಲೆಯಾದ ನತದೃಷ್ಟೆ ಯುವತಿಯ ಹೆಸರು ಶ್ರದ್ಧಾ. ಕೊಲೆಮಾಡಿದ ನಫ಼್ತಟಾಲ್ ನರರಕ್ಕಸ , ಅಫ಼್ತಾಬ್ ಅಮೀನ್ ಪೂನವಾಲಾ ಎಂಬ ಮಾನವ ರೂಪ ಹೊತ್ತ ಕಾಡು ಮೃಗ.

ಶ್ರದ್ಧಾ ಮುಂಬೈನ‌ ಎಂ.ಎನ್.ಸಿ ಕಂಪನಿ ಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಸಾಮಾಜಿಕ ಜಾಲತಾಣದ ಮೂಲಕ‌ ಪರಿಚಯವಾದ ಅಫ಼್ತಾಬ್ ಅಮೀನ್ ಎಂಬ ಪರಮ ಅಯೋಗ್ಯನ ಪ್ರೀತಿಯೆಂಬ ಆಕರ್ಷಣೆಗೆ‌ ಸಲೀಸಾಗಿ ಬೀಳುತ್ತಾಳೆ. ನಂತರ ಬಹುತೇಕ ಮೊಬೈಲ್‌ ಪ್ರೀತಿಗಳಂತೆ ಈ ಹುಚ್ಚು ಆಕರ್ಷಣೆ ಅವರ ನಡುವಿನ ಡೇಟಿಂಗ್ ನ‌ ಪರಾಕಾಷ್ಠೆ ತಲುಪಿದೆ. ಸಹಜವಾಗಿ ಎದುರಾದ ಮನೆಯವರ ವಿರೋಧವನ್ನೂ‌ ಲೆಕ್ಕಿಸದೇ ಈ ಲಫ಼ಂಗನೊಂದಿಗೆ ಭವಿಷ್ಯದ ಕನಸು ಕಂಡು ದೆಹಲಿಗೆ ಹಾರಿ ಅಲ್ಲಿ ಇವನೊಂದಿಗೆ ಕೂಡಿ ಬಾಳುವ ಕನಸಿಗೆ ಹೆಜ್ಜೆ ಇಟ್ಟಿದ್ದಾಳೆ. ಅವಳೊಂದಿಗೆ, ಅವಳ ಹಣದಲ್ಲಿ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿ ಸುಖ ಕಾಣುತ್ತಿದ್ದ ಈ ಕಂತ್ರಿಯಲ್ಲಿ, ದಿನ ಕಳೆದಂತೆ‌ ತನ್ನನ್ನು ಮದುವೆಯಾಗುವಂತೆ‌ ಪೀಡಿಸುತ್ತಿದ್ದ ಶ್ರದ್ಧಾಳ ವರ್ತನೆ‌ ಆಕ್ರೋಷ ಹುಟ್ಟಿಸಿ ಅವನಲ್ಲಿನ ಮೃಗತ್ವವನ್ನು ಹೊರಹಾಕಿದೆ. ಎಲ್ಲಿಯವರಗೆ ಅವಳ ಹಣ, ಸೌಂದರ್ಯ, ದೇಹ ಈ ಎಲ್ಲದರ ರುಚಿ‌ ಇತ್ತೋ ಅಲ್ಲಿಯವರೆಗೆ ಅವಳನ್ನು ಎಂಜಾಯ್ ಮಾಡಿ ತನ್ನ ಕಾಮತೃಷೆಯನ್ನು ತೀರಿಸಿಕೊಂಡು ಆನಂತರ‌ ಶ್ರದ್ಧಾಳನ್ನು ನಿರ್ದಯವಾಗಿ ಹತ್ಯೆ ಮಾಡಿದ್ದಾನೆ.

ಅಷ್ಟೇ ಆಗಿದ್ದಲ್ಲಿ ಈ ಪ್ರಕರಣಕ್ಕೆ ಇಷ್ಟೊಂದು‌ ಕ್ರೂರತೆ ಬರುತ್ತಿರಲಿಲ್ಲ. ಅವಳನ್ನು ಕೊಲೆ ಮಾಡಿ ಆನಂತರ ಅವಳ ಶವವನ್ನು 35 ತುಂಡುಗಳನ್ನಾಗಿ ಮಾಡಿ ಅದನ್ನು ದೆಹಲಿಯ ಮೆಹ್ರೌಲಿಯ ಅರಣ್ಯ ಭಾಗಗಳಿಗೆ ಮಧ್ಯರಾತ್ರಿ ಎರಡು ಘಂಟೆಯ ವೇಳೆಗೆ‌ ಹದಿನೆಂಟು ದಿನಗಳ ಕಾಲ ಹೋಗಿ ಎಸೆದಿದ್ದನಂತೆ ! ಅವಳ ದೇಹದ ತುಂಡುಗಳನ್ನಿರಿಸಲು‌ ಈ ಅಯೋಗ್ಯ ಹೊಸ ಫ಼್ತಿಡ್ಜ್ ಕೂಡಾ ಖರೀದಿಸಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆಯಂತೆ‌!

ಇಂತಹಾ‌ ಭೀಭತ್ಸ ದುಷ್ಕೃತ್ಯವನ್ನು ನೋಡಿದಾಗ ಯಾವ ಕೋನದಲ್ಲಿ ಮನುಷ್ಯನಾದವನು ಕ್ಷುದ್ರ ರಾಕ್ಷಸರಿಗಿಂತ ಕಡಿಮೆಯಿರಲು ಸಾಧ್ಯ ಎಂದೆನಿಸುವುದಲ್ಲವೇ ? ಇಂಥವರನ್ನು ಮನುಷ್ಯ ಎನ್ನಲು ಸಾಧ್ಯವೇ ?

ಮೊದಲನೆಯದಾಗಿ ಹರೆಯಕ್ಕೆ ಕಾಲಿಟ್ಟ‌ ಹುಡುಗಿಯರ‌ ಮನಸ್ಥಿತಿಯೆನ್ನುವುದು ಸುಲಭದ ಅರ್ಥಕ್ಕೆ ಸಿಗದ‌‌ ವಸ್ತುವಾಗಿ ಅಂದಿನಿಂದ ಇಂದಿನವರೆಗೂ ಉಳಿದಿದೆ. ಅದರಲ್ಲೂ ಇಂದಿನ ಅಂತರ್ಜಾಲ ಯುಗದಲ್ಲಿ , ಮೊಬೈಲ್ ಫೋನ್ ಗಳ ಭ್ರಮಾತ್ಮಕ ಬದುಕಲ್ಲಿ ಒಬ್ಬರನ್ನು ಆಕರ್ಷಣೆಗೆ ಒಳಗಾಗುವುದೂ- ಒಳಗಾಗಿಸುವುದೂ ಎರಡೂ ಸುಲಭ. ನೋಡಲು ಚಂದವಿರುವ ಸ್ಟೈಲಾಗಿರುವ ವ್ಯಕ್ತಿ ಮೊಬೈಲ್ ಸ್ಕ್ರೀನ್ ನಲ್ಲಿ ಪರಿಚಯವಾದನೆಂದರೆ ತಮ್ಮೆಲ್ಲಾ ಇಹಪರವನ್ನೂ ಮರೆತು, ವಾಸ್ತವ ಲೋಕದಿಂದ ಇನ್ನೆಲ್ಲೋ ಕಳೆದುಹೋಗಿಬಿಡುತ್ತಾರೆ. ಇದಕ್ಕೆ ಅಮಾಯಕ ಹುಡುಗಿ ಅಥವಾ ಹುಡುಗ ಯಾರಾದರೂ ಆಗಿರಬಹುದು.

ಇನ್ಸ್ಟಾ ಗ್ರಾಮ್, ಫ಼ೇಸ್ ಬುಕ್,ವಾಟ್ಸಪ್ ಗಳ ಚಾಟುಗಳಲ್ಲಿ , ಫೋಟೋಗಳಲ್ಲಿ ತಲೆತೂರಿಸಿ ಅಲ್ಲಿನ ಆಕರ್ಷಣೆಗೆ ಬಿದ್ದು ತಮ್ಮ ಕಾಲ ಮೇಲೆ ತಾವೇ‌ ಚಪ್ಪಡಿ ಎಳೆದುಕೊಳ್ಳುವ ಅನೇಕರಿದ್ದಾರೆ. ಈ ಹಂತದಲ್ಲಿ ಯಾರ ಬುದ್ದಿವಾದವಾಗಲೀ , ಯಾವುದೇ ವಾಸ್ತವ ಪ್ರಜ್ಞೆಯಾಗಲೀ ಕೆಲಸ ಮಾಡಲಾರದು. ಈ ಕಾರಣಕ್ಕಾಗಿಯೇ ಸಾಮಾಜಿಕ ಜಾಲತಾಣದ ಕೆಲ‌ ಕ್ಷುದ್ರ ಮನಸುಗಳು ಸರಿಯಾದ ಅವಕಾಶಕ್ಕಾಗಿ ಕಾದು ಸೂಕ್ತ ಸಮಯ ನೋಡಿ ತಮ್ಮ‌ ಖೆಡ್ಡಾಕ್ಕೆ ಅಮಾಯಕರನ್ನು ಬೀಳಿಸಿಕೊಂಡು ಇನ್ನಿಲ್ಲದ ಅಪರಾಧಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅದರಲ್ಲೂ ಹುಡುಗಿಯ/ ಮಹಿಳೆಯ ಜೊತೆ ಮೊಬೈಲ್ ನಲ್ಲಿ ಸಲಿಗೆ ಬೆಳೆಸಿಕೊಂಡು ಅವರೊಂದಿಗಿನ ಖಾಸಗಿ ಕ್ಷಣಗಳ ವಿಡಿಯೊ ಮಾಡಿ ಅಥವಾ ಅವರ ಖಾಸಗೀ ಪೋಸುಗಳ ಫೋಟೋಗಳನ್ನು ತೆಗೆದು ಬ್ಲಾಕ್ ಮೈಲ್ ಮಾಡುತ್ತಾ ಹೆದರಿಸಿ ಬ್ಲಾಕ್ ಮೈಲ್ ಮಾಡುತ್ತಾ ತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುತ್ತಾರೆ.

ಈ‌ ಬಗ್ಗೆ ಏನೇ ಎಚ್ಚರಿಕೆ ನೀಡಿದರೂ ಪ್ರಕರಣಗಳು ಕಡಿಮೆಯಾಗುವ ಬದಲು ದಿನೇ ದಿನೇ ಹೆಚ್ಚುತ್ತಿವೆ.

ಈ ಮೇಲಿನ ಘಟನೆಯಲ್ಲಿ ಮೂಲ ತಪ್ಪು ಎಲ್ಲಿದೆ ?

ಕೇವಲ ಮೊಬೈಲ್ ಸ್ಕ್ರೀನಿನಲ್ಲಿ ಚೆನ್ನಾಗಿ ಹಲ್ಲು ಕಿರಿದ ಅಯೋಗ್ಯನೊಬ್ಬ ನೋಡಲು ಸ್ಮಾರ್ಟಾಗಿದ್ದಾನೆಂಬ ಏಕೈಕ ಕಾರಣಕ್ಕಾಗಿ ಹಿಂದೆ ಮುಂದೆ ನೋಡದೇ ಇಪ್ಪತ್ತೈದು ವರ್ಷ ಸಾಕಿ ಸಲಹಿದ ತಂದೆ ತಾಯಿಯನ್ನೇ ಬಿಟ್ಟು ಅವನೊಟ್ಟಿಗೆ ಪರಾರಿಯಾಗಿ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದು ಮೈ, ಮನಸ್ಸು ಎರಡನ್ನೂ ಅನಾಮತ್ತು ಕೊಡುತ್ತಾರೆಂದರೆ ಅಲ್ಲಿಗೆ ತಪ್ಪು ಎಲ್ಲಿದೆ…. ಯಾರಲ್ಲಿದೆ ?

ಆಯ್ತು … ಪ್ರೀತಿಗೆ ಜಾತಿ, ಧರ್ಮ, ಅಂತಸ್ತು, ಉದ್ಯೋಗ ಇದಾವುದರ ಭೇದವಿಲ್ಲ ಎಂದಿಟ್ಟುಕೊಳ್ಳೋಣ. ಆದರೆ ಅವನು ನಿಜವಾಗಿಯೂ ಇವಳನ್ನು ಪ್ರೀತಿಸುವವನಾಗಿದ್ದರೆ ಮೊದಲು ಮದುವೆಯಾಗಿ ನಂತರ ರಿಲೇಷನ್ ಶಿಪ್ ಮುಂದುವರೆಸ ಬೇಕಿತ್ತಲ್ಲವೇ ? ನಿಜವಾದ ಪ್ರೀತಿಗೂ, ಸ್ವಾರ್ಥಕ್ಕಾಗಿ ಟಿಶ್ಯೂ ಪೇಪರಿನಂತೆ ಉಪಯೋಗಿಸಿ ಬಿಸಾಕುವ ಪ್ರೇತಗಳ ಟೆಂಪೊರೆರಿ ಕಿಕ್ಕಿಗೂ ವ್ಯತ್ಯಾಸ ಅರಿಯದೇ ಹೋದರೆ ಹಾಗೂ ವಾಸ್ತವ ಜಗತ್ತಿಗೆ ಮುಖ ಮಾಡದೇ ಭ್ರಮಾಲೋಕದ ಬಾಳಿನಲ್ಲಿ ಮುಳುಗೇಳುವ ಕನಸ ಕಂಡರೆ….ಅಲ್ಲಿ ಶ್ರದ್ಧಾಳಿಗೆ ಆದ ಗತಿ ಇಲ್ಲಿ ಎಲ್ಲರಿಗೂ ಆದೀತು ! ಎಚ್ಚರವಿರಲಿ.

** ಮರೆಯುವ ಮುನ್ನ **

ನಮ್ಮ ಸಮಾಜದ ಸಮಸ್ಯೆಯೆಂದರೆ ಎಂತಹಾ ಕಣ್ಣು ತೆರೆಸುವ ಘಟನೆಗಳಾದರೂ ಅವುಗಳನ್ನು ಬಹುಬೇಗ ಮರೆತು ಮತ್ತೇ‌‌ ಯಥಾ ಸ್ಥಿತಿಯ ಹಳಿಗೇ ಮರಳುವುದು ಹಾಗೂ ಒಳ್ಳೆಯದು – ಕೆಟ್ಟದರ ನಡುವಿನ ಸೂಕ್ಷ್ಮ‌ ವ್ಯತ್ಯಾಸದ ಪದರನ್ನು ಗುರುತಿಸಲು ಪರದಾಡುವುದು , ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿನ ಅವಾಸ್ತವಿಕತೆಗೆ, ಮಾಯಾ ಭ್ರಮೆಗೆ ಸಲೀಸಾಗಿ ತೆರೆದುಕೊಳ್ಳುವುದು. ವಸ್ತುಸ್ಥಿತಿ ಹೀಗಿರುವುದರಿಂದಲೇ ನೆಟ್ ಲೋಕದ ನಯವಂಚಕರು ಅತಿ ಸುಲಭಕ್ಕೆ ಯಾಮಾರಿಸಬಹುದಾದ ಹೆಣ್ಣು/ ಗಂಡು ಗಳನ್ನು ತಮ್ಮದೇ ಆದ ನೆಟ್ ವರ್ಕ್ ಮೂಲಕ ಜಾಣತನದಿಂದ ಹೆಕ್ಕಿ ಬಲೆ ಬೀಸಿ ತಮ್ಮ ಜಾಲಕ್ಕೆ ಕೆಡವಿ ಅವರ ಭವಿಷ್ಯದ ಜೊತೆ ಚೆಲ್ಲಾಟವಾಡಲು ಸಾಧ್ಯವಾಗಿರುವುದು.

ಶ್ರದ್ಧಾಳದ್ದು ಹೆಚ್ಚು ಕಡಿಮೆ ಇದೇ ರೇಂಜಿನ ಕೇಸು. ಅದೇನೇ ಇರಲಿ ! ಒಬ್ಬ ಅಮಾಯಕ ಯುವತಿಯ ಜೊತೆ ತಿಂಗಳುಗಳ ಕಾಲ ಡೇಟಿಂಗ್ ಮಾಡಿ ಅವಳದೆಲ್ಲವನ್ನೂ ಅನುಭವಿಸಿ ಆನಂತರ ಅವಳನ್ನು‌ ಬರ್ಬರವಾಗಿ ತುಂಡುತುಂಡಾಗಿ ಕತ್ತರಿಸಿ ಅರಣ್ಯ ಪ್ರದೇಶದಲ್ಲಿ ಹೂತು ಬರುತ್ತಾನೆಂದರೆ ಇಂಥವರನ್ನು ಯಾವುದರಲ್ಲಿ ಹೊಡೆಯಬೇಕು, ಯಾವ ಕಾನೂನಿನಿಂದ ಹೇಗೆ ಶಿಕ್ಷಿಸಬೇಕು ಅಥವಾ ಇತರರಿಗೆ ಪಾಠವಾಗುವ ಯಾವ ದಂಡನೆ ವಿಧಿಸಬೇಕು ಎಂಬುದು ತರ್ಕಕ್ಕೆ‌ ನಿಲುಕದ ಸಂಗತಿಯಾಗಿದೆ. ಇವನಿಗೆ ಕೊಡುವ ಶಿಕ್ಷೆ, ಈ ತರಹದ ಅಪರಾಧಗಳಲ್ಲಿ‌ ಭಾಗಿಯಾಗುವವರಿಗೆಲ್ಲಾ ಒಂದು ಎಚ್ಚರಿಕೆಯ ಗಂಟೆಯಾಗಲೆಂದಷ್ಟೇ ನಾವು ಆಶಿಸಬಹುದು.

ಅಫ಼್ತಾಬ್ ಅಮೀನ್ ನಂತಹ ಕ್ರೂರ ಮೃಗಗಳ ಬಗೆಗೆ, ಸಾಮಾಜಿಕ ಜಾಲತಾಣಗಳ ವಿಷಜಾಲಗಳ ಬಗೆಗೆ ಅಮಾಯಕ ಹೆಣ್ಣುಮಕ್ಕಳು ಮೈತುಂಬಾ ಎಚ್ಚರವಿರೋದು ಒಳ್ಳೆಯದು .

# ಲಾಸ್ಟ್ ಪಂಚ್ #

ಬಟ್ಟೆ ಮುಳ್ಳಿನ ಮೇಲೆ ಬಿದ್ದರೂ, ಮುಳ್ಳೇ ಬಟ್ಟೆಯ ಮೇಲೆ ಬಿದ್ದರೂ ಹರಿದು ಹಾಳಾಗುವುದು ಬಟ್ಟೆಯೇ !

ಪ್ರೀತಿಯಿಂದ…

ಹಿರಿಯೂರು ಪ್ರಕಾಶ್.

ಕನ್ನಡ ರಾಜ್ಯೋತ್ಸವದ ಪಣ – ಕಂಕಣ…….

ಮೊನ್ನೆ ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡೇತರರಿಗೆ ಕನ್ನಡದಲ್ಲಿ ಮಾತನಾಡುವ ಒಂದು ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.‌‌ಅಲ್ಲಿ ಭಾಗವಹಿಸಿದ್ದವರೆಲ್ಲಾ ಸುಮಾರು ಆರೇಳು ವರ್ಷಗಳಿಂದಲೂ ಹೆಚ್ಚಿನ ಕಾಲ ಕರ್ನಾಟಕದಲ್ಲಿಯೇ ವಾಸವಾಗಿದ್ದವರು , ಇಲ್ಲಿನ ಕನ್ನಡಿಗರೊಂದಿಗೆ ವ್ಯವಹರಿಸಿದವರು, ಇಲ್ಲಿಯ ಅನ್ನ , ನೀರು, ಗಾಳಿಯೊಂದಿಗೆ ಬದುಕು‌ ಕಟ್ಟಿಕೊಂಡವರೇ . ಮೇಲಾಗಿ ಅಲ್ಲಿದ್ದವರಲ್ಲಿ ಬಹುಪಾಲು ಮಂದಿ ನಮ್ಮ ಅಕ್ಕ ಪಕ್ಕದ ಕೇರಳ, ಆಂಧ್ರ, ತೆಲಂಗಾಣ, ತಮಿಳುನಾಡು ಹಾಗೂ ಸ್ವಲ್ಪಮಟ್ಟಿಗೆ ಉತ್ತರ ಭಾರತದ ರಾಜ್ಯಗಳಿಂದ ಬಂದಿದ್ದವರೇ ಆಗಿದ್ದರು. ಹೀಗಿದ್ದರೂ ಬಹುತೇಕ ಎಲ್ಲರೂ ಕನ್ನಡದಲ್ಲಿ ಎರಡು‌ ನಿಮಿಷ ಮಾತನಾಡಲು ಕಾರ್ಗಿಲ್‌ ಪರ್ವತವನ್ನು ಹತ್ತಿ ಇಳಿದಂತೆ ಏದುಸಿರು‌ ಬಿಡುತ್ತಿದ್ದರು.

ಎರಡು ನಿಮಿಷದ ಎರಡು ಸಾಲುಗಳಲ್ಲಿ ನಾಲ್ಕು ಕನ್ನಡ ಪದಗಳು ಅವರ ಬಾಯಿಂದ ಹೊರಬರಲು ಹೆಣಗಾಡುತ್ತಿದ್ದವು. ಅವರ ಈ ಸ್ಥಿತಿಯನ್ನು‌ ನೋಡಿ ಅಲ್ಲಿದ್ದ ಕನ್ನಡಿಗ ಸಹೋದ್ಯೋಗಿಗಳು ನಗಾಡುತ್ತಾ ಮಜಾ ತೆಗೆದುಕೊಳ್ಳುತ್ತಿದ್ದರು. ಒಬ್ಬ ಕನ್ನಡಿಗನಂತೂ ಇವರ ಬಾಯಿಂದ ಬರುವ ಈ ಹರಕು ಮುರುಕು ಅಪಭ್ರಂಶದ ಕನ್ನಡ ಕೇಳಿ ಮಜಾ ತೆಗೆದುಕೊಳ್ಳಲೆಂದೇ ಈ ಕಾರ್ಯಕ್ರಮ ಆಯೋಜಿಸಿದ್ದೇನೋ ಎನ್ನುವ ಮಟ್ಟಕ್ಕೆ ಅದೊಂದು ಹಾಸ್ಯ ಕಾರ್ಯಕ್ರಮ ಎಂಬಂತೆ ಖುಷಿ ಪಡುತ್ತಿದ್ದ‌.

ಅಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದ ಅನ್ಯ‌ಭಾಷಿಕ ಉದ್ಯೋಗಿಗಳು ತಮ್ಮನ್ನು ಅಪಹಾಸ್ಯ ಮಾಡಲೆಂದೇ ಇಲ್ಲಿ ಕರೆದಿದ್ದಾರೆಂಬ ಭಾವನೆಯೊಂದಿಗೆ ಅವರಿಗೆ ಬರುವ ಎರಡು ಕನ್ನಡ ಪದಗಳ ಜಾಗದಲ್ಲಿ ತಮ್ಮ‌ ಮಾತೃಭಾಷೆ ಅಥವಾ ಆಂಗ್ಲ ಪದಗಳನ್ನು ಸೇರಿಸಿ ಮಾತನಾಡುತ್ತಿದ್ದರು‌. ಈ ಸ್ಪರ್ಧೆಯ ಹೆಸರಿನಲ್ಲಿ‌ ನಡೆಯುತ್ತಿದ್ದ ನಕಲೀ ನವರಂಗೀ ಆಟಗಳಿಗೆ ಕನ್ನಡ ರಾಜ್ಯೋತ್ಸವ ಆಚರಣೆ ಎಂಬ ನಾಮಫಲಕ ಎಲ್ಲರನ್ನೂ ಅಣಕಿಸುವಂತಿತ್ತು.

ಏಕೋ ಏನೋ ಅದನ್ನು ಕಂಡು ಅಲ್ಲಿದ್ದ ನನಗೆ ಸಿಕ್ಕಾಪಟ್ಟೆ ಕಸಿವಿಸಿಯಾಗಿತ್ತು. ನನಗೆ ಪರಿಚಯವಿದ್ದ ಅಲ್ಲಿ ಭಾಗವಹಿಸಿದ್ದ ಒಂದಿಬ್ಬರು ಅನ್ಯ ಭಾಷಿಕರನ್ನು ಹಾಗೆಯೇ ಮಾತನಾಡಿಸುತ್ತಾ ತರಾಟೆಗೆ ತೆಗೆದುಕೊಂಡೆ.

” ಅಲ್ರೀ….ನೀವೆಲ್ಲಾ ನಮ್ಮ ನೆಲದಲ್ಲಿ ಕಳೆದ ಆರೇಳು‌ ವರ್ಷಗಳಿಂದ ಇದ್ದೀರಾ, ಇಲ್ಲಿನ ಕನ್ನಡದ ಗ್ರಾಹಕರೊಂದಿಗೆ ನಿತ್ಯವೂ ವ್ಯವಹರಿಸುತ್ತೀರ, ಬದುಕಿನ ನಿತ್ಯ ಸಾಗುವಿಕೆಗೆ ಇಲ್ಲಿನ ಜನರೊಂದಿಗೆ ಬೆರೆತಿದ್ದೀರ, ಕರ್ನಾಟಕದ ಪ್ರತಿಯೊಂದು ರಮಣೀಯ ಜಾಗವನ್ನೂ ಇಲ್ಲಿನ ಅನ್ನ, ನೀರು , ಉಸಿರು, ಹಸಿರು ಹೀಗೆ ಸಕಲ ಸೌಲಭ್ಯಗಳನ್ನೂ ಮನಸಾರೆ ಅನುಭವಿಸುತ್ತೀರ…..”ಬೆಂಗಳೂರು ವೆದರ್ ಫ಼ೆಂಟಾಸ್ಟಿಕ್ ” ಎನ್ನುತ್ತಾ ಎಲ್ಲೆಲ್ಲಿಂದಲೋ ಬಂದು ಇಡೀ ಬೆಂಗಳೂರನ್ನೇ ಆಕ್ರಮಿಸಿ ಕೊಂಡಿದ್ದೀರ, ಇಲ್ಲಿಯೇ ಹುಟ್ಟಿ ಬೆಳೆದವರು ನೆಟ್ಟಗೆ ಒಂದು ಸ್ವಂತ ಮನೆ ಮಾಡಿಕೊಳ್ಳಲೂ ಆಗದಂತಹಾ ವಾತಾವರಣದಲ್ಲಿ ನೀವೆಲ್ಲಾ ಎರಡು ಮೂರು ಅಪಾರ್ಟ್ ಮೆಂಟ್ ಖರೀದಿ ಮಾಡಿ ಜೀವನಪೂರಾ ಇಲ್ಲಿಯೇ ಝಾಂಡಾ ಹೂಡುತ್ತೀರ, ನಿಮ್ಮ ಮಕ್ಕಳಿಗೆ ಅತ್ಯುತ್ತಮ ವಿಧ್ಯಾಭ್ಯಾಸಕ್ಕೆ ಕರ್ನಾಟಕ ಬೇಕು, ಒಳ್ಳೆಯ ಸಾಫ಼್ಟ್ ವೇರ್ ಕಂಪನಿಗಳಲ್ಲಿ ಉದ್ಯೋಗ ಮಾಡಲು ಬೆಂಗಳೂರು ಬೇಕು, ಜೀವನದ ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡಲು ಕರ್ನಾಟಕದ ತಾಣಗಳು ಬೇಕು, ಯಾವುದೇ ದೊಡ್ಡ ದೊಡ್ಡ ಗದ್ದಲ, ಗಲಭೆ , ಉಗ್ರ ಚಟುವಟಿಕೆ‌, ಭೂಕಂಪ, ಸುನಾಮಿ…ಹರಾಮಿ ಇಲ್ಲದ ಸುರಕ್ಷಿತವಾದ ಕರ್ನಾಟಕ ನಿಮಗೆ ಬೇಕು, ನೀರು ಕೇಳಿದರೆ ಪಾನಕ ಕೊಡುವ ಸಹೃದಯ ಕನ್ನಡಿಗರ ಔದಾರ್ಯ ಬೇಕು, ನಿಮಗೆ ರಜೆಯ ಮಜಾ ತೆಗೆದುಕೊಳ್ಳಲು ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳು ಬೇಕು…..

ಈ ಎಲ್ಲವೂ ಬೇಕು‌….ಆದರೆ ನಿಮಗೆ ಕನ್ನಡ ಮಾತ್ರ ಬೇಡ..! ಅದನ್ನು ಕಲಿಯುವುದು ಮಾತ್ರ ಬೇಡ…ಅಲ್ಲವೇ..?

ಇಷ್ಟಾದರೂ ಎರಡು‌ ನಿಮಿಷ ನಾಲ್ಕು ಸಾಲು ಕನ್ನಡದಲ್ಲಿ‌ ಮಾತನಾಡಲು ನಿಮಗೆ ಬರೋಲ್ಲ ಅಂದ್ರೆ ಏನರ್ಥ ? ಕನ್ನಡದ ನೆಲದಲ್ಲಿ ಇಷ್ಟು ವರ್ಷ ವಾಸವಿದ್ದ ಮೇಲೆ ಇಲ್ಲಿನ‌ ಭಾಷೆ ಕಲಿಯುವ ಮನಸ್ಸೇ ನಿಮಗೆ ಇಲ್ಲವೇ ? ಕೊನೇಪಕ್ಷ ಇಲ್ಲಿನ ಸಂಸ್ಕೃತಿ , ಇತಿಹಾಸ, ಇತ್ಯಾದಿಗಳ ಬಗೆಗೆ ಸಾಸಿವೆ ಕಾಳಿನಷ್ಟಾದರೂ ಅರಿಯುವ ಮನಸ್ಸು ಬೇಡವೇ ? ಇದೆಂಥಾ ಅನ್ಯಾಯಾರೀ…? ನಾಚಿಕೆಗೇಡು……!

ಹೀಗೆ ನನ್ನ‌ ಮನದಾಳದಲ್ಲಿ‌ ಮಡುಗಟ್ಟಿದ್ದ ಆಕ್ರೋಷವನ್ನೆಲ್ಲಾ ಸೌಜನ್ಯದ ಪರಿಧಿಯಲ್ಲಿಯೇ ಹೊರಹಾಕಿದ್ದೆ. ಅಲ್ಲಿನ ಸಂಧರ್ಭ , ಕಚೇರಿಯ ವಾತಾವರಣ , ಅಧಿಕಾರಿಗಳೆಂಬ ಒಣ ಪೋಷಾಕು ಇಲ್ಲದಿದ್ದಲ್ಲಿ ಪಕ್ಕಾ ಹಿರಿಯೂರಿನ ಮಾಸ್ ಭಾಷೆಯಲ್ಲಿಯೇ ಕೇಳುತ್ತಿದ್ದೆನೋ ಏನೋ ಗೊತ್ತಿಲ್ಲ ಕಣ್ರೀ !

ಅದನ್ನೆಲ್ಲಾ ಸಮಾಧಾನದಿಂದ ಕೇಳಿದ ಮೇಲೆ ಅಲ್ಲಿದ್ದ ಅನ್ಯ‌ಭಾಷಿಕ ಉದ್ಯೋಗಿ ನನ್ನತ್ತ ತಿರುಗಿ ಹೇಳಿದ.

” ಪ್ರಕಾಶ್ ಸರ್, ನೀವು ಹೇಳಿದ್ದೆಲ್ಲಾ ಸರಿ , ನೂರಕ್ಕೆ‌‌ ನೂರು‌ ಒಪ್ಪುತ್ತೇನೆ. ನಾವು ಇಲ್ಲಿಗೆ ಬಂದು ಆರೇಳು ವರ್ಷದ ಮೇಲಾಯಿತು. ಬೆಂಗಳೂರೂ ಸೇರಿದಂತೆ ಕರ್ನಾಟಕದ ನಾಲ್ಕೈದು ಊರು ತಿರುಗಿದ್ದೇವೆ. ಕನ್ನಡಿಗರೊಂದಿಗೆ ನಿತ್ಯವೂ ವ್ಯವಹರಿಸುತ್ತೇವೆ. ಆದರೆ ನಿಮ್ಮ ಕರ್ನಾಟಕದ ಯಾವುದೇ ಭಾಗದಲ್ಲೂ ಅದರಲ್ಲೂ ಬೆಂಗಳೂರಿನಲ್ಲಿ ಕನ್ನಡ ಕಲಿಯುವ ನಯಾಪೈಸೆಯಷ್ಟು ವಾತಾವರಣ ಇಲ್ಲ. ನಮಗೆ ಅಲ್ಪ ಸ್ವಲ್ಪ ಕನ್ನಡ ಅರ್ಥ ಆಗುತ್ತಿದ್ದರೆ ಅದು ಸಣ್ಣಪುಟ್ಟ ಹಳ್ಳಿಗಳಲ್ಲಿ ಸೇವೆ ಮಾಡುವಾಗ ಅರ್ಥ ಮಾಡಿಕೊಂಡಿದ್ದು ಅಷ್ಟೇ.

ಆತ ಹಾಗೆಯೇ ಮುಂದುವರೆಯುತ್ತಾ…

ಬೆಳಿಗ್ಗೆ ಎದ್ದು ನಮ್ಮ ಅಪಾರ್ಟ್ ಮೆಂಟ್ ಸುತ್ತ ಅಥವಾ ಪಾರ್ಕಿಗೆ ವಾಕಿಂಗ್ ಅಂತ ಹೋದರೆ ಅಲ್ಲೆಲ್ಲಾ ಬರೀ ಇಂಗ್ಲಿಷ್, ಹಿಂದಿ‌ ಮಾತನಾಡುವ ಇಲ್ಲವೇ ನಮ್ಮ‌ ಮಾತೃ ಭಾಷೆ ಮಾತನಾಡುವ ಮಂದಿ ಸಿಗುತ್ತಾರೆ. ಹಾಲು ಮೊಸರು ತೆಗೆದುಕೊಳ್ಳಲು ಅಂಗಡಿಗೆ ಹೋದರೆ ಅಲ್ಲಿನ ಕನ್ನಡಿಗ ಅಂಗಡಿಯವನೂ ಸಹ ನನ್ನ ಮಾತೃಭಾಷೆ ಗುರುತಿಸಿ ನಮ್ಮ ಭಾಷೆಯಲ್ಲಿಯೋ ಅಥವಾ ಹರಕು ಮುರುಕು ಹಿಂದಿ- ಇಂಗ್ಲಿಷ್ ನಲ್ಲಿಯೋ ಮಾತನಾಡಿಸುತ್ತಾನೆ. ರೇಷನ್ ತೆಗೆದುಕೊಳ್ಳಲು ಇಲ್ಲವೇ ಮಾಲ್ ಗಳಿಗೆ ಅಂತ‌ ಹೋದಾಗಲೂ ಇದೇ ಕಥೆ, ನಮಗೆ ಭಾಷೆ ಸಮಸ್ಯೆ ಇಲ್ಲ, ಇನ್ನು‌ ಒಮ್ಮೊಮ್ಮೆ ಆಟೋ ಅಥವಾ ಕ್ಯಾಬ್ ಬುಕ್ ಮಾಡಿಕೊಂಡು ಕಚೇರಿಗೆ ಹೋಗುವಾಗಲೂ ಅವರೂ ಸಹ ನಾವು ಅನ್ಯ‌ಭಾಷಿಕರೆಂದು ಗೊತ್ತಾಗಿ ನಮ್ಮ ಜೊತೆ ಕನಡ ಬಿಟ್ಟು ನಮ್ಮ ಭಾಷೆಯಲ್ಲಿಯೇ ( ತೆಲುಗು ತಮಿಳು ‌ಹಿಂದಿ…) ಮಾತನಾಡಿಸುತ್ತಾರೆ. ಇನ್ನು ಆಫ಼ೀಸಿಗೆ ಹೋದರೆ ಅಲ್ಲಿ ಇಡೀ ದಿನ ಹಿಂದಿ‌-ಇಂಗ್ಲಿಷು…! ಕನ್ನಡ ಮಾತನಾಡುವವರು ಸಾವಿರ ಸಂಖ್ಯೆಯಲ್ಲಿದ್ದರೂ ನಮ್ಮೊಡನೆ ಅವರೆಂದೂ ಕನ್ನಡದಲ್ಲಿ‌ ಮಾತನಾಡಿಸುವ ಯತ್ನ ಮಾಡಲೇ ಇಲ್ಲ. ಬದಲಿಗೆ ನಮ್ಮ ಮಾತೃಭಾಷೆ ಯಲ್ಲಿಯೇ ತೊದಲು ತೊದಲಾಗಿ ಮಾತನಾಡಿಸುತ್ತಾ ವ್ಯವಹರಿಸುತ್ತಾರೆ. ಆಮೇಲೆ ಗ್ರಾಹಕರೂ ಕೂಡಾ ಅಷ್ಟೇ ! ಅವರಿಗೆ ಕೆಲಸ ಆಗಬೇಕೇ‌ ವಿನಃ ನಮಗೆ ಭಾಷೆ ಬಂದರೆಷ್ಟು‌, ಬಿಟ್ಟರೆಷ್ಟು ! ಅವರೂ ಹಿಂದಿ‌-ಇಂಗ್ಲಿಷ್ ನಲ್ಲಿ ವ್ಯವಹರಿಸುತ್ತಾರೆ.

ಹೋಟೆಲ್ಲು, ಸಿನಿಮಾ, ಮಾಲು, ಪಬ್ಬು ,ಬಾರು, ಪ್ರವಾಸ ಹೀಗೆ ಎಲ್ಲೂ ನಮಗೆ ಕನ್ನಡ ಅನಿವಾರ್ಯ ಎಂಬ ವಾತಾವರಣವೇ ನಿಮ್ಮ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿಲ್ಲ.ನಮಗೆ ಕನ್ನಡ ಕಲಿಸುವ ಬದಲು ಅವರೇ‌ ನಮ್ಮ ನಮ್ಮ‌ ಮಾತೃ ಭಾಷೆಯಲ್ಲಿ ಅಥವಾ ಹರಕು ಇಂಗ್ಲಿಷ್‌- ಹಿಂದಿಯಲ್ಲಿ ಉಲಿಯುತ್ತಾರೆ. ನಿಮ್ಮವರಿಗೂ ನಮ್ಮೊಡನೆ ಆಂಗ್ಲ ಭಾಷೆಯಲ್ಲಿ ಮಾತನಾಡಿದಷ್ಟೂ ಒಂಥರಾ ಖುಷಿ ಅನಿಸುತ್ತೆ. ಹೀಗೆ ಇಲ್ಲಿ ಕನ್ನಡ ಕಲಿಯುವ ಪರಿಸ್ಥಿತಿಯೇ ಇಲ್ಲದಿರುವಾಗ ನಾವು ನಮ್ಮ ರಾಜ್ಯದಲ್ಲಿಯೇ ಇರುವಂತಹಾ ಫ಼ೀಲಿಂಗ್ ಇರುವಾಗ ಕನ್ನಡ ಎಲ್ಲಿಂದ ಕಲಿಯುವುದು ? ಇದರಲ್ಲಿ ನಮ್ಮ ತಪ್ಪು ಏನಿದೆ ಸಾರ್ ??

ಈ ತರಹದ ಕಾರ್ಯಕ್ರಮಗಳಲ್ಲಿ ಎರಡು‌ ನಿಮಿಷ ಕನ್ನಡ ಮಾತನಾಡಿಸಿದರೆ ನಮಗೆ ಕನ್ನಡ ಬರುತ್ತಾ..? ನಮ್ಮನ್ನು‌ ನೋಡಿ ಹಾಸ್ಯ ಮಾಡಿದಲ್ಲಿ‌ ನಮಗೆ ಕಲಿಯುವ ಉತ್ಸಾಹ ಮೂಡುತ್ತಾ..? ನಮ್ಮ ರಾಜ್ಯಗಳಿಗೆ ಬಂದು‌ ನೋಡಿ. ಅಲ್ಲಿ ಮಾತೃಭಾಷೆ ಬಿಟ್ಟು ಬೇರೆ ಭಾಷೆಯನ್ನು‌ ಅನಿವಾರ್ಯವಿದ್ದಾಗ ಮಾತ್ರ ಮಾತನಾಡುತ್ತೇವೆ. ಇಲ್ಲಿ ಹಾಗಲ್ಲ.ಕನ್ನಡವೆಂದರೆ ಕನ್ನಡಿಗರಿಗೇ ಅಸಡ್ಡೆ …..

ಇಷ್ಟೆಲ್ಲಾ ಹೇಳಿದ ಮೇಲೆ ಕೊನೆಯದಾಗಿ ಅವನು‌ ಹೇಳಿದ ಮಾತು ಹೀಗಿತ್ತು.

” ಕರ್ನಾಟಕದಲ್ಲಿ ಕನ್ನಡ ಬರದಿದ್ದರೂ‌ ಹುಟ್ಟಿನಿಂದ ಸಾಯುವವರೆಗೂ ಯಾವುದೇ ಸಮಸ್ಯೆಗಳಿಲ್ಲದೇ, ಅದನ್ನು ಕಲಿಯದೇ ನಮ್ಮ ರಾಜ್ಯಕ್ಕಿಂತಲೂ ಹೆಚ್ಚಿಗೆ ಆರಾಮಾಗಿ‌ ಬದುಕಬಹುದು ” !!

ಈಗ ಹೇಳಿ……ನನಗೆ ಹೇಳಲು ಏನಾದರೂ ಉಳಿದಿದೆಯೇ……??

ರಾಜ್ಯೋತ್ಸವವೆಂದರೆ ಹಳದಿ‌-ಕೆಂಪು‌ ಬಾವುಟಗಳನ್ನು ಎಲ್ಲೆಡೆ ರಾರಾಜಿಸುತ್ತಾ , ಡಿಜೆ ಸೆಟ್‌ಗಳಲ್ಲಿ ಅಬ್ಬರದ ಕನ್ನಡ ಹಾಡುಗಳನ್ನು ಅಬ್ಬರಿಸುತ್ತಾ, ತಾಯಿ ಭುವನೇಶ್ವರಿಯ ಹಾಗೂ ಒಂದಷ್ಟು ಸಾಹಿತಿ ಕಲಾವಿದರ ಚಿತ್ರಗಳಿಗೆ ಮಾರುದ್ದ ಮಾಲೆಗಳನ್ನು ಹಾಕಿ, ಅದ್ದೂರಿಯ ಕಾರ್ಯಕ್ರಮಗಳನ್ನು ನಡೆಸಿ ರಾಜಕಾರಣಿಗಳು, ಸಾಹಿತಿಗಳು, ಹಾಸ್ಯ ಕಲಾವಿದರು, ಸಿನಿಮಾದವರು ಹಾಗೂ ಕನ್ನಡದ‌ ಹೋರಾಟಗಾರರನ್ನು ಕರೆಸಿ ಉದ್ದುದ್ದ ಭಾಷಣಗಳನ್ನು‌ ಕುಟ್ಟಿಸಿ ಭಾರೀ ಚಪ್ಪಾಳೆಗಳ ಮಧ್ಯೆ ನವಂಬರ್ ತಿಂಗಳಲ್ಲಿ ಹಾಗೆಯೇ ಕಳೆದು ಹೋಗುವುದಲ್ಲ ಅಥವಾ ಕನ್ನಡದ ಶತಶತಮಾನಗಳ ಐಸಿರಿಯನ್ನು ನೆನೆನೆನೆದು ಗತವೈಭವದ ರೋಚಕತೆಯ ಗುಂಗಿನಲ್ಲಿಯೇ ವರ್ತಮಾನದ ವಾಸ್ತವ ಸಂಕಷ್ಟಗಳನ್ನು ಮರೆಯುವುದಲ್ಲ. ಕನ್ನಡದ ಸಮಸ್ಯೆಗಳು, ಸವಾಲುಗಳು ನಮ್ಮ ಕಣ್ಣೆದುರೇ ತಾಂಡವವಾಡುತ್ತಿವೆ. ಕನ್ನಡ ಉಳಿಯುವುದು ಬೆಳೆಯುವುದು ಅದರ ಸತತ ಬಳಕೆಯಿಂದಲೇ ಹೊರತು ಬರಿಯ ಭಾವನಾತ್ಮಕ ಭಾಷಣಗಳಿಂದಲ್ಲ, ಅಥವಾ ನವಂಬರ್ ತಿಂಗಳ ವರ್ಣರಂಜಿತ, ತೋರಿಕೆಯ ಕಾರ್ಯಕ್ರಮಗಳಿಂದಲ್ಲ.

ನಿಮಗೆ ನಮ್ಮ‌ ಕರುನಾಡು, ಕನ್ನಡ ನುಡಿ ಹಾಗೂ ಕನ್ನಡಿಗರ ಬೆಲೆ‌, ನೆಲೆ, ಮೌಲ್ಯ ಹಾಗೂ ಭಾಷಾಭಿಮಾನದ ಬಗೆಗೆ ಅಕ್ಷರಶಃ ಅರಿವಾಗಬೇಕಾದಲ್ಲಿ ಒಮ್ಮೆ ನಮ್ಮ ಅಕ್ಕಪಕ್ಕದ ರಾಜ್ಯಗಳಿಗೆ ಹೋಗಿ ನಾಲ್ಕಾರು ದಿನ‌ ಇದ್ದು ಬನ್ನಿ ಅಥವಾ ನಾಲ್ಕಾರು ತಿಂಗಳು ಜೀವನ ಮಾಡಿ ಬನ್ನಿ. ತಮಿಳುನಾಡಿನಲ್ಲಿ ತಮಿಳು ಅಥವಾ ಕೇರಳದಲ್ಲಿ ಮಲೆಯಾಳಂ ಭಾಷೆ ಬಾರದಿದ್ದರೆ ಬದುಕುವುದು ಎಷ್ಟು ದುಸ್ತರ ಎಂಬ ಅರಿವಿದ್ದವರಿಗೆ ಮಾತ್ರ ಕರ್ನಾಟಕದಲ್ಲಿ ಅನ್ಯಭಾಷಿಕರೇಕೆ ಕನ್ನಡ ಕಲಿಕೆಯುತ್ತಿಲ್ಲ ಎಂಬ ದುಃಸ್ಥಿತಿಯ ಮನನವಾಗಲು ಸಾಧ್ಯ. ಅಕ್ಕಪಕ್ಕದ ರಾಜ್ಯಗಳಲ್ಲಿ ಕೇವಲ ಸಾಮಾನ್ಯ ಜನರು ಮಾತ್ರವಲ್ಲ, ಉನ್ನತ‌‌ ಹುದ್ದೆಗಳಲ್ಲಿರುವವರೂ ತಮ್ಮ ಮಾತೃಭಾಷೆಯಲ್ಲಿಯೇ ವ್ಯವಹರಿಸುತ್ತಾರೆ, ಅವರ ಭಾಷೆ‌ ಬಳಸಲು ಹೆಮ್ಮೆ‌ಪಡುತ್ತಾರೆ.

ಆದರೆ ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ, ಶಾಸ್ತ್ರೀಯ ಸ್ಥಾನಮಾನ ಹೊಂದಿರುವ, ಹಿಂದಿಯ ನಂತರ ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿರುವ, ಕಲಿಯಲು ಅತ್ಯಂತ ಸುಲಭವಾದ, ನೋಡಲು ಮುತ್ತಿನ ಹಾರದಂತಿರುವ, ಹೇಳಿದ್ದನ್ನೇ ಬರೆಯುವ, ಬರೆದದ್ದನ್ನೇ ಹೇಳುವಂತಹ ಅಕ್ಷರ ಸಂಪತ್ತಿರುವ, ಜೇನಿನ ಹೊಳೆಯಂತಹ – ಹಾಲಿನ ಸುಧೆಯಂತಹಾ, ಸೌಹಾರ್ದತೆ- ಸಹೃದಯಕ್ಕೆ ಹೆಸರಾಗಿರುವ, ಕನ್ನಡವೆಂಬ ನಮ್ಮ ಹೆಮ್ಮೆಯ ಭಾಷೆಯನ್ನು ಸರಿಯಾಗಿ ಬಳಸದೇ, ಬಳಸಲು ಹೆಮ್ಮೆ ಪಡದೇ ನಾವು ಕಡೆಗಣಿಸಿದ್ದೇವೆಯೇ ಎಂಬ ಪ್ರಾಮಾಣಿಕ ಆತ್ಮಾವಲೋಕನವನ್ನು ಪ್ರತಿಯೊಬ್ಬ ಕನ್ನಡಿಗನೂ ಈ ರಾಜ್ಯೋತ್ಸವದಂದು‌ ಮಾಡಿಕೊಳ್ಳುವ ಪಣ ತೊಡಬೇಕಿದೆ.

** ‌ಮರೆಯುವ ಮುನ್ನ **

ಕನ್ನಡಿಗರಿಗೆ ಕನ್ನಡದ ಮೇಲೆ ಅಭಿಮಾನವಿಲ್ಲವೆಂದಲ್ಲ! ಅದು ಖಂಡಿತಾ ಇದೆ. ಆದರೆ ಕರುನಾಡಿನಲ್ಲಿ‌ ಕನ್ನಡಕ್ಕೇ ಪೂಜ್ಯತೆ- ಆದ್ಯತೆ ಎನ್ನುವ ಮನೋಭಾವದಲ್ಲಿ ಕೊರತೆಯಿದೆ, ಕನ್ನಡೇತರರು ಕನ್ನಡ ಕಲಿಯದಿದ್ದರೆ ಬದುಕಲು ದುಸ್ಸಾಧ್ಯವೆಂಬ ವಾತಾವರಣ‌ ನಿರ್ಮಾಣದ ಕೊರತೆಯಿದೆ, ಕನ್ನಡೇತರರನ್ನು ಕನ್ನಡದ ವಾಹಿನಿಗೆ ಕರೆತರುವ ಕನ್ನಡದ ಮನಸುಗಳ ಕೊರತೆಯಿದೆ, ಕನ್ನಡ ಬಳಸಿದರೆ ಕೀಳರಿಮೆ ಎಂಬ ಕೆಲವರ ಭಾವನೆಯಿದೆ, ನಿಜವಾದ ಕನ್ನಡ ಹೋರಾಟಗಾರರನ್ನು ಬೆಂಬಲಿಸುವ ಮನಸ್ಥಿತಿಯ ಕೊರತೆಯಿದೆ, ಅನ್ಯರೆಡೆಗೆ ಅತಿಯಾದ ಔದಾರ್ಯವಿದೆ, ಇವೆಲ್ಲದರ ಜೊತೆಗೆ ಆಡಳಿತ ನಡೆಸುವವರ ಇಚ್ಛಾಶಕ್ತಿಯ ಕೊರತೆಯೂ ಸಾಕಷ್ಟಿದೆ.

ಒಮ್ಮೆ ಅರಿತುಕೊಳ್ಳೋಣ. ಎಂಥಾ ಸವಿಯಿದೆ ನಮ್ಮ ಈ ಭಾಷೆಯಲ್ಲಿ….ಎಂಥಾ ಮಾಧುರ್ಯವಿದೆ ಈ ನುಡಿಯಲ್ಲಿ,
ಎಂಥಾ ಸೊಗಸಿದೆ ಇದನ್ನು ಬಳಸುವಲ್ಲಿ, ಎಂಥಾ ಸೌಂದರ್ಯವಿದೆ ಅಕ್ಷರಗಳನ್ನು ಪೋಣಿಸಿದಲ್ಲಿ.! ಈ ಪರಿಯ ಭಾಷೆಯ ಸೊಗಡು- ಬೆಡಗು, ಈ ಪರಿಯ ಐಸಿರಿಯ ಬೆರಗು, ಈ ಪರಿಯ ಸಾಹಿತ್ಯ ಸಂಪತ್ತು ಮತ್ತೆಲ್ಲಿ‌ ನೋಡಲಿಕ್ಕೆ ಸಾಧ್ಯ ? ನೆನಪಿಡಿ…. ನಿರಂತರ ಬಳಕೆಯಿಂದ ಮಾತ್ರವೇ ಕನ್ನಡ ಉಳಿಯಬಲ್ಲದು ಬೆಳೆಯಬಲ್ಲದು. ಈ ನಿಟ್ಟಿನಲ್ಲಿ ಕನ್ನಡಮ್ಮನ ಸೇವೆಗೈದು ಈ ಮಣ್ಣಿನಲ್ಲಿ ಹುಟ್ಟಿದ ಋಣ ತೀರಿಸುವ ಕಂಕಣ ತೊಡೋಣ. ಇದೇ ನಿಜವಾದ ರಾಜ್ಯೋತ್ಸವ.

ಕನ್ನಡಿಗನು ನೀನೆಂಬ ಅಭಿಮಾನವಿರಲಿ.

#ಲಾಸ್ಟ್ ಪಂಚ್ ”

ಕರ್ನಾಟಕದಲ್ಲಿ ಎಲ್ಲಿಯವರೆಗೆ ಕನ್ನಡ “ಅನ್ನದ‌ ಭಾಷೆ, ಅನಿವಾರ್ಯದ ಭಾಷೆ” ಯಾಗಲಾರದೋ, ಅಲ್ಲಿಯವರೆಗೂ ಕನ್ನಡ ರಾಜ್ಯೋತ್ಸವಕ್ಕೆ ನೈಜಾರ್ಥ ಸಿಗಲಾರದು.

ಪ್ರೀತಿಯಿಂದ….

ಹಿರಿಯೂರು ಪ್ರಕಾಶ್.

You cannot copy content of this page