ಆಯುಷ್ಮಾನ್ ಭವ ಕಾರ್ಯಕ್ರಮಕ್ಕೆ ಡಿಹೆಚ್‍ಒ ಡಾ.ಆರ್.ರಂಗನಾಥ್ ಚಾಲನೆ ಜಿಲ್ಲೆಯಲ್ಲಿ 14 ಲಕ್ಷಕ್ಕೂ ಅಧಿಕ ಆಯುಷ್ಮಾನ್ ಕಾರ್ಡ್ ವಿತರಿಸುವ ಗುರಿ.

by | 13/09/23 | ಆರೋಗ್ಯ


ಚಿತ್ರದುರ್ಗ(ಕರ್ನಾಟಕ ವಾರ್ತೆ)ಸೆ.13:
ಜಿಲ್ಲೆಯಲ್ಲಿ 14ಲಕ್ಷಕ್ಕೂ ಅಧಿಕ ಆಯುಷ್ಮಾನ್ ಕಾರ್ಡ್‍ಗಳ ರಚನೆ ಹಾಗೂ ವಿತರಣೆ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ರಂಗನಾಥ್ ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯುಷ್ಮಾನ್ ಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಇದುವರೆಗೆ ಶೇ.37.5 ರಷ್ಟು ಆಯುಷ್ಮಾನ್ ಕಾರ್ಡ್ ಪ್ರಗತಿ ಸಾಧಿಸಲಾಗಿದೆ. ಇನ್ನೂ 14 ಲಕ್ಷಕ್ಕೂ ಅಧಿಕ ಆಯುಷ್ಮಾನ್ ಕಾರ್ಡ್‍ಗಳ ರಚನೆ ಹಾಗೂ ವಿತರಣೆ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಹೆಚ್ಚು ಒತ್ತು ಕೊಟ್ಟು ಆಯುಷ್ಮಾನ್ ಕಾರ್ಡ್ ರಚನೆ ಹಾಗೂ ವಿತರಣೆಗೆ ಕಟಿಬದ್ಧರಾಗಬೇಕು. ಪ್ರತಿಯೊಬ್ಬರಿಗೂ ಆಯುಷ್ಮಾನ್ ಕಾರ್ಡ್ ಲಭಿಸುವ ರೀತಿಯಲ್ಲಿ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.
ಆಯುಷ್ಮಾನ್ ಭವಃ “ಅಂತ್ಯೋದಯ” ಕಾರ್ಯಕ್ರಮ ಇದೊಂದು ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದ್ದು, ಇದರ ಮೂಲ ಉದ್ದೇಶ ಪ್ರತಿ ಹಳ್ಳಿಯಲ್ಲಿ ಆರೋಗ್ಯ ಸೇವೆ ನೀಡುವುದಾಗಿದೆ. ಈ ಕಾರ್ಯಕ್ರಮವನ್ನು ಎಲ್ಲಾ ಹಳ್ಳಿ ಹಾಗೂ ಪಟ್ಟಣ ಪ್ರದೇಶದ ವಾರ್ಡ್‍ಗಳಲ್ಲಿ ಆರೋಗ್ಯ ಸೇವೆ ವಿಸ್ತರಣೆಗೊಳಿಸುವುದರ ಮುಖಾಂತರ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ನೀಡುವುದಾಗಿದೆ ಎಂದರು.
ಆಯುಷ್ಮಾನ್ ಭವ ಕಾರ್ಯಕ್ರಮದಲ್ಲಿ ಒಟ್ಟು ಮೂರು ತೆರನಾದ ಆರೋಗ್ಯ ಸೇವೆಗಳನ್ನು ನೀಡಲಾಗುತ್ತಿದ್ದು, ಮೊದಲನೇಯದಾಗಿ ಆಯುಷ್ಮಾನ್ ಆಪ್ಕೆ ದ್ವಾರ್ 3.0 ಈ ಕಾರ್ಯಕ್ರಮವನ್ನು ಇದೇ ಸೆಪ್ಟೆಂಬರ್ 17 ರಿಂದ ಪ್ರಾರಂಭಿಸಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ನಾಗರೀಕರಿಗೆ ಆಯುಷ್ಮಾನ್ ಕಾರ್ಡ್‍ಗಳನ್ನು ವಿತರಿಸಲಾಗುವುದು. ಎರಡನೇಯದಾಗಿ ಆಯುಷ್ಮಾನ್ ಮೇಳ-ಇದೊಂದು ಆರೋಗ್ಯ ಮೇಳವಾಗಿದ್ದು, ಇಲ್ಲಿ ಜನಸಾಮಾನ್ಯರಿಗೆ ರೋಗ ಪರೀಕ್ಷೆ, ಪ್ರಯೋಗಾಲಯ ಪರೀಕ್ಷೆ ಹಾಗೂ ವಿವಿಧ ರಾಷ್ಟ್ರೀಯ ಕಾರ್ಯಕ್ರಮಗಳ ಮಾಹಿತಿ ನೀಡುವ ಕಾರ್ಯಕ್ರಮವಾಗಿದೆ. ಆಯುಷ್ಮಾನ್ ಮೇಳ ಕಾರ್ಯಕ್ರಮದಲ್ಲಿ ನಾಲ್ಕು ವಾರಗಳಲ್ಲಿ ನಾಲ್ಕು ತೆರನಾದ ಸೇವೆಗಳು ನೀಡುವುದಾಗಿದೆ. ಮೊದಲನೇ ವಾರ ಎನ್.ಸಿ.ಡಿ ಸೇವೆಗಳು, ಮಾಹಿತಿ, ಎರಡನೇ ವಾರ ಸಾಂಕ್ರಾಮಿಕ ರೋಗಗಳ ಸೇವೆಗಳ ಮಾಹಿತಿ, ಮೂರನೇ ವಾರ ತಾಯಿ-ಮಕ್ಕಳ ಸೇವೆ ಕುರಿತು ಮಾಹಿತಿ, ನಾಲ್ಕನೇ ವಾರ ರಾಜ್ಯ, ಜಿಲ್ಲೆಯಲ್ಲಿ ಇರುವಂತಹ ನಿಗದಿತ ರೋಗಗಳ ಸೇವೆಗಳ ಮಾಹಿತಿ ನೀಡಲಾಗುವುದು ಎಂದರು.
ಮೂರನೇದಾಗಿ ಆಯುಷ್ಮಾನ್ ಸಭೆ ಕಾರ್ಯಕ್ರಮವು ಅಕ್ಟೋಬರ್ 2ರಂದು ಪ್ರಾರಂಭವಾಗಲಿದ್ದು, ಇಲ್ಲಿ ಗ್ರಾಮ, ವಾರ್ಡ್‍ಗಳಲ್ಲಿ ಸಭೆ ನಡೆಸಿ, ಆಯುಷ್ಮಾನ್ ಕಾರ್ಡ್, ಆರೋಗ್ಯ ಸೇವೆಗಳು, ವಿವಿಧ ರೋಗಗಳ ತಪಾಸಣೆ, ಚಿಕಿತ್ಸೆ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಈ ಎಲ್ಲಾ ಕಾರ್ಯಕ್ರಮಗಳು ಸೆಪ್ಟೆಂಬರ್ 17 ರಿಂದ ಪ್ರಾರಂಭವಾಗಿ ಡಿಸೆಂಬರ್ ಅಂತ್ಯದವರೆಗೆ ನಡೆಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಚಂದ್ರಶೇಖರ್ ಕಂಬಾಳಿಮಠ್, ರೋಗ ಶಾಸ್ತ್ರಜ್ಞ ಡಾ.ರುದ್ರೇಶ್, ಎನ್‍ಸಿಡಿ ಜಿಲ್ಲಾ ಸಂಯೋಜಕಿ ಡಾ.ಶ್ವೇತಾ, ತಾಲ್ಲೂಕು ಆರೋಗ್ಯ ಶಿಕ್ಷಾಣಾಧಿಕಾರಿ ಎನ್.ಎಸ್.ಮಂಜುನಾಥ್ ಸೇರಿದಂತೆ ಜಿಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.
ಆರೋಗ್ಯ ತಪಾಸಣೆ: ಚಿತ್ರದುರ್ಗ ತಾಲ್ಲೂಕಿನ ಮದಕರಿಪುರ ಆರೋಗ್ಯ ಕ್ಷೇಮ ಉಪಕೇಂದ್ರದಲ್ಲಿ ಎನ್‍ಸಿಡಿ (ಸಾಂಕ್ರಾಮಿಕವಲ್ಲದ ರೋಗಗಳು) ಆರೋಗ್ಯ ತಪಾಸಣೆಯಲ್ಲಿ ಮಧುಮೇಹ ಮತ್ತು ರಕ್ತದೊತ್ತಡ ಪರೀಕ್ಷೆಗಳನ್ನು ಕೈಗೊಂಡು ಜೀವನಶೈಲಿ ಮತ್ತು ಆಹಾರಶೈಲಿ ಬದಲಾವಣೆಯ ಆರೋಗ್ಯ ಶಿಕ್ಷಣ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ಮದಕರಿಪುರ ಪಿಡಿಒ ನಾಗರಾಜ್, ಸಮುದಾಯ ಆರೋಗ್ಯ ಅಧಿಕಾರಿ ರಶ್ಮಿ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳಾದ ಮನುಜ, ಪವಿತ್ರ, ಆರೋಗ್ಯ ನಿರೀಕ್ಷಣಾಧಿಕಾರಿ ಜ್ಯೋತಿ, ಆಶಾ ಕಾರ್ಯಕರ್ತೆಯರು ಇದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *