ಚಿತ್ರದುರ್ಗ ನ. 16
ಅಲ್ಪಸಂಖ್ಯಾತರ ಸಮುದಾಯದ ಏಳಿಗೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಅಲ್ಪಸಂಖ್ಯಾತರ ಸಮುದಾಯದವರು ಈ ಯೋಜನೆಗಳ ಅರಿವು ಪಡೆದು, ಯೋಜನೆಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಅವರು ಮನವಿ ಮಾಡಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಜ್ ಮತ್ತು ವಕ್ಫ್ ಇಲಾಖೆ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ವತಿಯಿಂದ ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾದ ಅಲ್ಪಸಂಖ್ಯಾತರ ಸಮುದಾಯದವರ ಕುಂದುಕೊರತೆ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಚಿತ್ರದುರ್ಗ ಜಿಲ್ಲೆ ಶಾಂತಿಯುತ ಜಿಲ್ಲೆಯಾಗಿದ್ದು, ಇಲ್ಲಿ ಕೋಮು ಸೌಹಾರ್ದತೆ, ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದು, ಇಲ್ಲಿನ ಜನ ಶಾಂತಿಪ್ರಿಯರು, ಈ ಭಾಗದ ಜನರ ಸಂಸ್ಕøತಿ, ಹಿರಿಯರ ಮಾರ್ಗದರ್ಶನವೇ ಶಾಂತಿ ಸೌಹಾರ್ದತೆಗೆ ಕಾರಣವಾಗಿದೆ ಎಂದು ಪ್ರಶಂಸಿದರು.
ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ್, ಬೌದ್ಧ ಮತ್ತು ಪಾರ್ಸಿ ಸೇರಿದಂತೆ ಅಲ್ಪಸಂಖ್ಯಾತರ ಸಮುದಾಯವು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಹಿಂದುಳಿದಿದ್ದು, ಅವರ ಏಳಿಗೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳಡಿ, ವಿವಿಧ ಇಲಾಖೆಯಲ್ಲಿ ಜಾರಿಯಲ್ಲಿರುವ ಯೋಜನೆಗಳಲ್ಲಿ ಶೇ. 15 ರಷ್ಟು ಅಲ್ಪಸಂಖ್ಯಾತರ ವರ್ಗಕ್ಕೆ ನೀಡಬೇಕು ಎಂದಿದೆ. ಸಾಂವಿಧಾನಿಕ ಹಕ್ಕುಗಳಿಗೆ ಧಕ್ಕೆ ಉಂಟಾದಾಗ, ಅಲ್ಪಸಂಖ್ಯಾತರ ಆಯೋಗವು ಅವರ ರಕ್ಷಣೆಗೆ ನಿಲ್ಲುತ್ತದೆ, ಅಲ್ಪಸಂಖ್ಯಾತರಿಗೆ ದೊರಕಬೇಕಾದ ಸೌಲಭ್ಯಗಳನ್ನು ದೊರಕಿಸಲು ಕ್ರಮ ಕೈಗೊಳ್ಳುತ್ತದೆ ಎಂದರು.
ಕೆಲವೆಡೆ ಮತೀಯ ಗಲಭೆ ಸಂಭವಿಸಿದಾಗ ಆಯೋಗವೇ ಖುದ್ದು ತೆರಳಿ, ಸಾರ್ವಜನಿಕರು ಹಾಗೂ ಆಡಳಿತ ವರ್ಗದಿಂದ ಮಾಹಿತಿ ಪಡೆದು, ತಪ್ಪಿತಸ್ಥರಿಗೆ ಶಿಕ್ಷೆ ದೊರಕಿಸುವುದು ಹಾಗೂ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸುವ ಪ್ರಯತ್ನ ಮಾಡುತ್ತದೆ. ಜೈಲಿನಲ್ಲಿಯೂ ಕೂಡ ಅಲ್ಪಸಂಖ್ಯಾತರ ವರ್ಗಕ್ಕೆ ನ್ಯಾಯ ದೊರಕಿಸಲು, ಸರ್ಕಾರಕ್ಕೆ ಕೆಲವು ಶಿಫಾರಸ್ಸು ಮಾಡುವ ಕಾರ್ಯವನ್ನು ಕೂಡ ಆಯೋಗ ಮಾಡುತ್ತಿದೆ. ಅಲ್ಪಸಂಖ್ಯಾತರ ಸಮುದಾಯದವರೇ ಹೆಚ್ಚಿರುವ ಕಾಲೋನಿಗಳಿಗೆ ಆಯೋಗ ಭೇಟಿ ನೀಡಿ, ಅಲ್ಲಿ ಕುಡಿಯುವ ನೀರು, ಚರಂಡಿ, ಆರೋಗ್ಯ ಸೇರಿದಂತೆ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಿ, ಲೋಪದೋಷಗಳಿದ್ದಲ್ಲಿ ಸರಿಪಡಿಸುವ ಕಾರ್ಯ ಮಾಡುತ್ತಿದೆ. ಚರ್ಚ್, ಮಸೀದಿ, ಗುರುದ್ವಾರಗಳಿಗೆ ತೆರಳಿ, ಅಲ್ಲಿನ ಮುಖಂಡರೊಂದಿಗೆ ಮಾತನಾಡಿ, ಸಮುದಾಯದ ಅಭಿವೃದ್ಧಿಗೆ ಅಗತ್ಯವಿರುವ ಕಾರ್ಯಗಳ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡುತ್ತಿದೆ. ಸರ್ಕಾರಿ ಯೋಜನೆಗಳು ದೊರಕದಿರುವುದು, ಆಡಳಿತ ವರ್ಗದಿಂದ ಅನ್ಯಾಯ ಆದಲ್ಲಿ ಅಥವಾ ಯಾವುದೇ ದೌರ್ಜನ್ಯಕ್ಕೆ ಒಳಗಾದ ಅಲ್ಪಸಂಖ್ಯಾತರ ವರ್ಗದವರು ನ್ಯಾಯಕ್ಕಾಗಿ ಆಯೋಗಕ್ಕೆ ನೇರವಾಗಿ ಅರ್ಜಿ ಸಲ್ಲಿಸಬಹುದು, ಆಯೋಗವೇ ನ್ಯಾಯಾಲಯದ ಮಾದರಿಯಲ್ಲಿ ವಿಚಾರಣೆ ನಡೆಸುವ ಅಧಿಕಾರ ಹೊಂದಿದೆ ಎಂದರು. ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿಕೆಯಲ್ಲಿ ತೊಂದರೆಯಾದ ಕಾರಣದಿಂದ ಆಯೋಗವೇ ಕೇಂದ್ರ ಸಚಿವರನ್ನು ಭೇಟಿಯಾಗಿ 48 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಲು ಶ್ರಮಿಸಿದೆ. ಜಿಲ್ಲೆಗಳಲ್ಲಿ ವಕ್ಫ್ ಆಸ್ತಿಗಳ ರಕ್ಷಣೆ ಆಗಬೇಕು, ಒತ್ತುವರಿಗಳನ್ನು ತೆರವುಗೊಳಿಸುವ ಕಾರ್ಯ ಆಗಬೇಕು ಎಂದು ಆಯೋಗದ ಅಧ್ಯಕ್ಷರು ಹೇಳಿದರು.
ಜಿಲ್ಲಾ ಕೇಂದ್ರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ : ಚಿತ್ರದುರ್ಗದ ಮಹಮದ್ ಫಯಾಜ್ ಅವರು ಮಾತನಾಡಿ, ಐಎಎಸ್, ಐಪಿಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಅಲ್ಪಸಂಖ್ಯಾತರ ಸಮುದಾಯದವರು ಬೆಂಗಳೂರು ಅಥವಾ ದೆಹಲಿ ಮುಂತಾದೆಡೆ ತೆರಳಬೇಕು, ಆದರೆ ಆರ್ಥಿಕ ವಾಗಿ ಹಿಂದುಳಿದ ನಮ್ಮ ಸಮುದಾಯಕ್ಕೆ ಇದು ಕಷ್ಟಕರವಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಆಯೋಗದ ಅಧ್ಯಕ್ಷರು, ಇದು ಉತ್ತಮ ಬೇಡಿಕೆಯಾಗಿದ್ದು, ಜಿಲ್ಲೆಯ ಪ್ರತಿಭಾನ್ವಿತ 25 ರಿಂದ 35 ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಜಿಲ್ಲಾ ಕೇಂದ್ರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ವಸತಿ ಸಹಿತ ತರಬೇತಿ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಬೆಂಗಳೂರಿನ ವಕ್ಫ್ ಭವನದಲ್ಲಿ ಸುಮಾರು 800 ವಿದ್ಯಾರ್ಥಿಗಳಿಗೆ ವಸತಿ ಸಹಿತ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.
ಅಲ್ಪಸಂಖ್ಯಾತರ ಸಮುದಾಯದ ವಿವಿಧ ಸಾರ್ವಜನಿಕರು ಕುಂದುಕೊರತೆ ಸಭೆಯಲ್ಲಿ ಮನವಿ ಸಲ್ಲಿಸಿದರು. ಚಿತ್ರದುರ್ಗದ ಹೋಲಿ ಫ್ಯಾಮಿಲಿ ಚರ್ಚ್‍ನ ಫಾದರ್ ಕ್ಲಾರೆನ್ಸ್ ಡಯಾಸ್ ಅವರು ಮಾತನಾಡಿ, ತಮ್ಮ ಚರ್ಚ್ ನವೀಕರಣಕ್ಕೆ 30 ಲಕ್ಷ ರೂ. ಅನುದಾನ ಮಂಜೂರಾಗಿತ್ತು, ಇದರಲ್ಲಿ 22.5 ಲಕ್ಷ ರೂ. ಬಿಡುಗಡೆಯಾಗಿದ್ದು, ಬಾಕಿ ಇರುವ 7.5 ಲಕ್ಷ ರೂ. ಅನುದಾನ ಬಿಡುಗಡೆಗೆ ವಿಳಂಬವಾಗುತ್ತಿದೆ, ಈ ಬಗ್ಗೆ ಆಯೋಗವು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದರು. ಅಲ್ಪಸಂಖ್ಯಾತರ ಸಮುದಾಯದ ಬೀದಿ ಬದಿ ವ್ಯಾಪಾರಿಗಳಿಗೆ ಬ್ಯಾಂಕ್‍ನವರು ಸಾಲ ಸೌಲಭ್ಯ ನೀಡುತ್ತಿಲ್ಲ, ಸಿಬಿಲ್ ಸ್ಕೋರ್, ಐಟಿ ರಿಟನ್ರ್ಸ್ ಸೇರಿದಂತೆ ವಿವಿಧ ನೆಪಗೊಳೊಡ್ಡಿ ಅರ್ಜಿ ತಿರಸ್ಕರಿಸುತ್ತಿದ್ದಾರೆ. ಇಲಾಖೆಗಳಿಂದ ಮಂಜೂರಾತಿ ದೊರೆತರೂ ಬ್ಯಾಂಕ್‍ಗಳು ಸಾಲ ನೀಡುತ್ತಿಲ್ಲ ಎಂದು ಕೆಲವರು ದೂರಿದರು, ಪ್ರತಿಕ್ರಿಯಿಸಿದ ಆಯೋಗದ ಕಾರ್ಯದರ್ಶಿ ಸಲ್ಮಾ ಫಿರ್ದೋಸ್ ಅವರು, 03 ಲಕ್ಷ ರೂ. ಗಳವರೆಗಿನ ಸಾಲಕ್ಕೆ ಬ್ಯಾಂಕ್‍ಗಳು ಸಿಬಿಲ್ ಸ್ಕೋರ್ ಪರಿಗಣಿಸಬಾರದು ಎಂದು ಈಗಾಗಲೆ ಸರ್ಕಾರ ಸ್ಪಷ್ಟವಾಗಿ ಸುತ್ತೋಲೆ ಹೊರಡಿಸಿದೆ, ಬಾಧಿತರು ಆಯೋಗಕ್ಕೆ ದೂರು ಸಲ್ಲಿಸಬಹುದು ಎಂದರು.
ಹೊಸದುರ್ಗದ ಜಾಫರ್ ಸಾದಿಕ್ ಮಾತನಾಡಿ, ಹೊಸದುರ್ಗದಲ್ಲಿ ಹೊಸದಾಗಿ ಸ್ಮಶಾನ ಮಂಜೂರಾಗಿದ್ದು, ಆದರೆ ಸಮುದಾಯದ ಉಪಯೋಗಕ್ಕೆ ಇನ್ನೂ ದೊರಕಿಲ್ಲ, ಪ್ರತಿ ತಾಲ್ಲೂಕಿಗೂ ಒಂದು ಮೌಲಾನಾ ಆಜಾದ್ ಸ್ಕೂಲ್ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು. ಪ್ರತಿಕ್ರಿಯಿಸಿದ ಆಯೋಗದ ಅಧ್ಯಕ್ಷರು ಸ್ಮಶಾನ ಇಲ್ಲದ ಗ್ರಾಮ ಅಥವಾ ಪಟ್ಟಣಗಳಿಗೆ ಆದ್ಯತೆ ಮೇರೆಗೆ ಸ್ಮಶಾನ ನೀಡಬೇಕು ಎಂದು ಈಗಾಗಲೆ ಸರ್ಕಾರ ಸ್ಪಷ್ಟ ಸೂಚನೆ ನೀಡಿದೆ, ಒಂದು ವೇಳೆ ಸ್ಮಶಾನಕ್ಕೆ ಸ್ಥಳ ಇಲ್ಲದವರು ಆಯಾ ತಹಸಿಲ್ದಾರರಿಗೆ ಅರ್ಜಿ ಸಲ್ಲಿಸಬೇಕು. ಸ್ಮಶಾನಕ್ಕೆ ಜಾಗ ದೊರಕದಿದ್ದಲ್ಲಿ ಆಯೋಗಕ್ಕೆ ಅರ್ಜಿ ಸಲ್ಲಿಸಬಹುದು, ಆಯೋಗವು ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಿದೆ ಎಂದರು.
ಸಭೆಯಲ್ಲಿ ಶಾದಿ ಮಹಲ್, ಶಾಲೆಗಳು, ವಿದ್ಯಾರ್ಥಿ ವೇತನ ಬಿಡುಗಡೆ, ವಕೀಲರಿಗೆ ಶಿಷ್ಯ ವೇತನ, ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪನೆ, ಕ್ರಿಶ್ಚಿಯನ್ ಪವಿತ್ರ ಸ್ಥಳಕ್ಕೆ ಯಾತ್ರೆ ಕೈಗೊಳ್ಳಲು ಸಹಾಯಧನ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಸಂಬಂಧಿದ ಮನವಿಗಳು ಸಲ್ಲಿಕೆಯಾದವು.
ಸಭೆಯಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿ ಸಲ್ಮಾ ಫಿರ್ದೋಸ್, ಆಯೋಗದ ಉಪನಿರ್ದೇಶಕ ರಘುನಾಥ್, ವಿಶೇಷ ಕರ್ತವ್ಯಾಧಿಕಾರಿ ಮುಜೀಬುಲ್ಲಾ, ಜಿ.ಪಂ. ಯೋಜನಾ ನಿರ್ದೇಶಕ ಡಾ. ರಂಗಸ್ವಾಮಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕಾಂತರಾಜ್ ಸೇರಿದಂತೆ ವಿವಿಧ ಸಮುದಾಯದ ಮುಖಂಡರಾದ ತಾಜ್‍ಪೀರ್, ಕ್ಲಾರೆನ್ಸ್ ಡಯಾಸ್, ಅಬ್ದುಲ್ ಬಷೀರ್, ಅಬ್ದುಲ್ ರೆಹಮಾನ್ ಮುಂತಾದವರು ಉಪಸ್ಥಿತರಿದ್ದರು.
ಅಲ್ಪಸಂಖ್ಯಾತರ ಸಮುದಾಯದ ಕುಂದುಕೊರತೆ ಸಭೆ ಸರ್ಕಾರಿ ಯೋಜನೆಗಳ ಅರಿವು ಪಡೆದು, ಸದುಪಯೋಗಪಡಿಸಿಕೊಳ್ಳಿ- ಅಬ್ದುಲ್ ಅಜೀಮ್
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments